ಸುಳ್ಯ:ಸುಳ್ಯ ತಾಲೂಕು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಮೇ.13ರಂದು ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಕೆಡಿಪಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.ಸುಳ್ಯ ತಾಲೂಕಿನಲ್ಲಿ ಅಕ್ರಮ ಸಕ್ರಮ ಸಮಿತಿ ಸಭೆಗಳು ನಡೆಯುತ್ತಿಲ್ಲ, ಕಡತಗಳು ವಿಲೇವಾರಿ ಆಗುತ್ತಿಲ್ಲ ಎಂದು
ಕೆಡಿಪಿ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ತೀರ್ಥರಾಮ ಜಾಲ್ಸೂರು, ಜಯಪ್ರಕಾಶ್ ನೆಕ್ರಪ್ಪಾಡಿ, ಪರಮೇಶ್ವರ ಕೆಂಬಾರೆ ಮತ್ತಿತರರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಚರ್ಚೆ ನಡೆಯಿತು.ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಎಂ.ಮಂಜುಳ ಪ್ರತಿ ತಿಂಗಳು ಅಕ್ರಮ ಸಕ್ರಮ ಸಮಿತಿ ಸಭೆ ನಡೆಯುತಿದೆ. 8ರಿಂದ 10 ಕಡತಗಳು ವಿಲೇವಾರಿಯಾಗುತಿದೆ ಎಂದು ಉತ್ತರಿಸಿದರು.ತಾಲೂಕಿನಲ್ಲಿ ಆರೂವರೆ ಸಾವಿರಕ್ಕೂ ಅಧಿಕ ಕಡತಗಳು ವಿಲೇವಾರಿಗೆ ಬಾಕಿ ಇದೆ ಎಂದು ಅವರು ಉತ್ತರಿಸಿದರು.
ವಿವಿಧ ಕಡೆಗಳಲ್ಲಿ 94ಸಿ ಕಡತ ವಿಲೇವಾರಿ ಆಗುತ್ತಿಲ್ಲ ಎಂದು ಕೆಡಿಪಿ ಸದಸ್ಯ ಅಶ್ರಫ್ ಗುಂಡಿ ಹೇಳಿದರು.ಸುಳ್ಯ ನಗರದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿದೆ, ನಗರ ಪಂಚಾಯತ್ ಇದರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಆರೋಪಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಇಲ್ಲ,
ನಿರ್ದಿಷ್ಟ ಪ್ರಕರಣದ ಬಗ್ಗೆ ತಿಳಿಸುವಂತೆ ನಗರ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್ ಹೇಳಿದರು. ಅಧಿಕಾರಿಗಳೇ ಪರಿಶೀಲನೆ ನಡೆಸಿ ಅಕ್ರಮ ಕಟ್ಟಡ ನಿರ್ಮಾಣ ತಡೆಯುವಂತೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಹಾಗೂ ಕೆಡಿಪಿ ಸದಸ್ಯರು ಒತ್ತಾಯಿಸಿದರು. ಈ ಕುರಿತು ಪರಿಶೀಲನೆ ನಡೆಸುವಂತೆ ಶಾಸಕರು ಸೂಚಿಸಿದರು.

ಪಯಸ್ವಿನಿ ನದಿಗೆ ಮಣ್ಣು ಹಾಕುವವರ ವಿರುದ್ಧ ನೋಟೀಸ್ ನೀಡಿ ಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರ್ ನಗರ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದರು. ಸುಳ್ಯದಲ್ಲಿ ವಿದ್ಯುತ್ ಕಡಿತ ಸಮಸ್ಯೆಯಿಂದ ಜನ ಹೈರಾಣಾಗಿದ್ದಾರೆ.ಒಂದು ಮಳೆ ಬಂದರೆ ಸುಳ್ಯದಲ್ಲಿ ದಿನಗಟ್ಟಲೆ ವಿದ್ಯುತ್ ಕಡಿತ ಉಂಟಾಗುತಿದೆ ಎಂದು ಧರ್ಮಪಾಲ ಕೊಯಿಂಗಾಜೆ ಹೇಳಿದರು.ಮಳೆಗಾಲಕ್ಕೆ ಮುನ್ನ ಲೈನ್ಗೆ ತಾಗುವ ಮರದ ಗೆಲ್ಲುಗಳನ್ನು ಕಡಿದು ಲೈನ್ಗಳನ್ನು ಸುಸ್ಥಿತಿಯಲ್ಲಿ ಇಡುವಂತೆ ಶಾಸಕರು ಮೆಸ್ಕಾಂ ಇಂಜಿನಿಯರ್ಗೆ ಸೂಚಿಸಿದರು.
ತಾಲೂಕಿನಲ್ಲಿ ಹೆಚ್ಚಳಗೊಂಡಿರುವ ಕಾಡಾನೆ ಹಾವಳಿ ಕುರಿತ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು
ಕಾಡಾನೆ ಹಾವಳಿ ತಡೆಯುವ ನಿಟ್ಟಿನಲ್ಲಿ ಸೋಲಾರ್ ಬೇಲಿ, ಆನೆ ಕಂದಕಗಳನ್ನು ರಚಿಸುವ ಕುರಿತು ಬೇಡಿಕೆಗಳನ್ನು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರದಿಂದ ಮಂಜೂರಾಗಿರುವ ಅನುದಾನದ ಲಭ್ಯತೆ ಮೇರೆಗೆ ಅಗತ್ಯ ಸ್ಥಳಗಳಲ್ಲಿ ಸೋಲಾರ್ ಬೇಲಿ, ಕಂದಕ ನಿರ್ಮಿಸಲಾಗುವುದು. ಅಲ್ಲದೆ ರೈತರು ನಿರ್ಮಿಸುವ ಸೋಲಾರ್ ಬೇಲಿಗೆ ಶೇ.50:50 ಅನುಪಾತದಲ್ಲಿ ಸಹಾಯಧನ ನೀಡಲಾಗುತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.













