ಸುಳ್ಯ:ಸುಳ್ಯ ತಾಲೂಕು ಮಟ್ಟದ ವಿಪತ್ತು ನಿರ್ವಹಣಾ ಸಮಿತಿ ಸಭೆ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.ಮಾನ್ಸೂನ್ ಪೂರ್ವ ಮತ್ತು ಮಾನ್ಸೂನ್ ವಿಪತ್ತು ನಿರ್ವಹಣೆಗೆ ಎಲ್ಲಾ ಸಿದ್ಧತೆ ನಡೆಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.ತಾಲೂಕು ಮಟ್ಟದ ವಿಪತ್ತು ನಿರ್ವಹಣಾ ಸಮಿತಿ ಅಗತ್ಯ ಪೂರ್ವ ಸಿದ್ಧತೆಗಳೊಂದಿಗೆ ಮಂಜಾಗ್ರತಾ ಕ್ರಮಗಳನ್ನು
ಕೈಗೊಳ್ಳಬೇಕು ಮತ್ತು ಕ್ಷಿಪ್ರ ಕಾರ್ಯಚರಣೆ ಸಿದ್ಧತೆಗಳನ್ನು ಮಾಡಿಕೊಳ್ಳುವ ಅಗತ್ಯ ಇದೆ ಎಂದು ಶಾಸಕರು ತಿಳಿಸಿದರು. ಇಲಾಖೆಗಳು ಕೈಗೊಳ್ಳಬೇಕಾದ ಪೂರ್ವ ಸಿದ್ಧತಾ ಮಂಜಾಗ್ರತಾ ನಿರ್ವಹಣಾ ಕ್ರಮಗಳನ್ನು ಸೂಚಿಸಲಾಯಿತು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಿ ಸಭೆಗಳನ್ನು ನಡೆಸಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು.ತಾಲೂಕಿನ ಅತಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ವರದಿ ಸಲ್ಲಿಸಿ, ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಬೇಕು,ಚರಂಡಿಗಳ ದುರಸ್ತಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು,
ಅಮೃತ್, ಜಲಜೀವನ್ ಮತ್ತಿತರ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಪೈಪ್ ಲೈನ್ ಕಾಮಗಾರಿಗಳಿಂದ ಆದ ಹೊಂಡಗಳನ್ನು ಮುಚ್ಚಬೇಕು. ಕುಡಿಯುವ ನೀರಿನ ಯೋಜನೆಗಳನ್ನು

ಪೂರ್ತಿ ಮಾಡಬೇಕು. ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು. ಶಾಲಾ-ಕಾಲೇಜು, ಅಂಗನವಾಡಿ, ಸರ್ಕಾರಿ ಕಚೇರಿಗಳು, ಕಾಲುಸಂಕಗಳು, ಸಣ್ಣ ಸೇತುವೆಗಳ ಸುಸ್ಥಿತಿಯಲ್ಲಿರುವ ಬಗ್ಗೆ ದೃಢೀಕರಿಸಿ ವರದಿ ಸಲ್ಲಿಸಬೇಕು.ವಿದ್ಯುತ್ ಕಂಬಗಳು, ವಿದ್ಯುತ್ ತಂತಿಗಳನ್ನು ಸುಸ್ಥಿತಿಯಲ್ಲಿಡಬೇಕು. ಸಾಂಕ್ರಾಮಿಕ ರೋಗಗಳು, ಇತರೆ ಆರೋಗ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕು ಮತ್ತು ಅಗತ್ಯ ಮುಂಜಾಗೃತೆ ವಹಿಸಬೇಕು. ಪ್ರಾಕೃತಿ ವಿಕೋಪ ತಡೆಗೆ ಮುಂಜಾಗೃತಾ ಕ್ರಮ ವಹಿಸುವುದು.ರಕ್ಷಣಾ ತಂಡಗಳನ್ನು ಸಿದ್ದಪಡಿಸಬೇಕು.
ತಾಲೂಕಿನಲ್ಲಿರುವ ಕಿಂಡಿ ಅಣೆಕಟ್ಟುಗಳು ಸುಸ್ಥಿತಿಯಲ್ಲಿರುವಂತೆ ಪರಿಶೀಲಿಸಿ ವರದಿ ಸಲ್ಲಿಸುವುದು. ನದಿ ಪಾತ್ರದಲ್ಲಿ ವಾಸವಿರುವ ಮನೆಗಳನ್ನು ಪಟ್ಟಿ ಮಾಡಿ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು.
ತಾಲೂಕು ಮಟ್ಟದ ಎಲ್ಲಾ ಇಲಾಖಾ ಅಧಿಕಾರಿಗಳು ಸಿಬ್ಬಂದಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿದ್ದು ಜಿಲ್ಲಾ ಮತ್ತು ತಾಲೂಕು ವಿಪತ್ತು ಸಮಿತಿಯ ಆದೇಶ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಸೂಚಿಸಿದರು. ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಸಲಹೆ ಸೂಚನೆಗಳನ್ನು ನೀಡಿದರು.
ಉಪ ತಹಶೀಲ್ದಾರ್ ಪೂರ್ಣಿಮಾ, ತಾಲೂಕು ಕಚೇರಿ ಪ್ರಥಮ ದರ್ಜೆ ಸಹಾಯಕರಾದ ಉಷಾ ಹಾಗು ಇತರ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.













