ಸುಳ್ಯ:ಸುಳ್ಯದ ಹಿರಿಯ ಪತ್ರಕರ್ತ ಜೆ.ಕೆ.ರೈ (ಜಯಕೃಷ್ಣ ರೈ54) ಇನ್ನಿಲ್ಲ. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಚಿಕಿತ್ಸೆಯಲ್ಲಿದ್ದ ಅವರು ಶನಿವಾರ ರಾತ್ರಿ 11ಗಂಟೆಯ ವೇಳೆಗೆ ನಿಧನರಾದರು.ಅವರ ಆರೋಗ್ಯ ಕ್ಷೀಣಿಸಿದ ಕಾರಣ ಎರಡು ದಿನಗಳ ಕಾಲ ಕೆವಿಜಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದ್ದ ಅವರನ್ನು
ಶನಿವಾರ ಸಂಜೆ ಆಸ್ಪತ್ರೆಯಿಂದ ನಾರ್ಕೋಡಿನ ಅವರ ಮನೆಗೆ ಕರೆದೊಯ್ಯಲಾಗಿತ್ತು.ಅಲ್ಲಿ ರಾತ್ರಿ ಕೊನೆಯುಸಿರೆಳೆದರು.
ಸ್ಥಳೀಯ ಪಯಸ್ವಿನಿ ವಾರ ಪತ್ರಿಕೆ, ವಾರ್ತಾ ಸಂಚಯ ಪತ್ರಿಕೆಗಳ ಸಂಪಾದಕರಾಗಿದ್ದ ಜೆ.ಕೆ.ರೈ ಅವರು ಕೆಲವು ಸಂಜೆ ಪತ್ರಿಕೆಗಳ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರರಾಗಿ, ಛಾಯಾಗ್ರಾಹಕರಾಗಿ ಕರ್ತವ್ಯ ನಿರ್ವಹಿಸಿದ್ದ ಅವರು ಸುಳ್ಯ ತಾಲೂಕು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದರು. ಸುಳ್ಯ
ಪ್ರೆಸ್ ಕ್ಲಬ್ನ ಸ್ಥಾಪಕ ಅಧ್ಯಕ್ಷರಾಗಿದ್ದ ಅವರು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಸುಳ್ಯ ಪ್ರೆಸ್ ಕ್ಲಬ್ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಕ್ರೀಯರಾಗಿ ದುಡಿದಿದ್ದರು. ರೋಟರಿ ಕ್ಲಬ್, ಬಂಟರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು.
ಜೆ.ಕೆ.ರೈ ಅವರು ನಿವೃತ್ತ ಫಾರೆಸ್ಟರ್ ಸುಳ್ಯದ ಗಾಂಧಿನಗರದ ನಾರಾಯಣ ರೈ ಹಾಗೂ ದಿ. ಕಮಲ ರೈಯವರ ಎರಡನೇ ಪುತ್ರ. ಪತ್ನಿ-ಜಯಲಕ್ಷ್ಮಿ, ಪುತ್ರಿ ಶಮಿತಾ ರೈ (ಸಾಫ್ಟ್ ವೇರ್ ಇಂಜಿನಿಯರ್) ಪುತ್ರ ಪ್ರಮಿತ್ ರೈ(ವಿದ್ಯಾರ್ಥಿ).









