ಮಂಗಳೂರು: ರಾಜ್ಯದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)-2026 ಪ್ರಕ್ರಿಯೆ ಪೂರ್ಣಗೊಂಡಿದೆ. ಇದರನ್ವಯ ದಕ್ಷಿಣ ಕನ್ನಡ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ 9,064 ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿಲ್ಲೆಯಲ್ಲಿ
ಪ್ರಕಟಗೊಂಡಿರುವ ಅಂತಿಮ ಮತದಾರರ ಪಟ್ಟಿಯಂತೆ ಒಟ್ಟು 16,78,448 ಮತದಾರರಿದ್ದಾರೆ. ಈ ಪೈಕಿ 8,23,198 ಪುರುಷರು ಹಾಗೂ 8,55,232 ಮಹಿಳಾ ಮತದಾರರಾಗಿದ್ದಾರೆ. 18 ತೃತೀಯ ಲಿಂಗಿ ಮತದಾರರಿದ್ದಾರೆ ಎಂದು ಹೇಳಿದರು.
ಆಗಸ್ಟ್ 24ರಂದು ಪ್ರಕಟಿಸಲಾಗಿದ್ದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 16,46,387 ಮತದಾರರಿದ್ದರು. ಅಂತಿಮ ಪಟ್ಟಿಯಲ್ಲಿ ನೋಟಿಸ್ ನೀಡಿದ ಬಳಿಕ 32,061 ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದವರು ವಿವರಿಸಿದರು.
ಮರಣ ಹಾಗೂ ಖಾಯಂ ಆಗಿ ಸ್ಥಳಾಂತರಗೊಂಡವರು ಸೇರಿ ಒಟ್ಟು 9,064 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ತಿದ್ದುಪಡಿಗೆ ಸಂಬಂಧಿಸಿ 53,806 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವಿಧಾನಸಭಾ ಕ್ಷೇತ್ರವಾರು ಅಂತಿಮ ಮತದಾರರ ಸಂಖ್ಯೆ:
ಸುಳ್ಯ-1,99,593,
ಬೆಳ್ತಂಗಡಿ-2,22,254,
ಮಂಗಳೂರು ನಗರ ಉತ್ತರ:
2,27530,
ಮಂಗಳೂರು ನಗರ ದಕ್ಷಿಣ:2,12,512
ಮಂಗಳೂರು-1,98,956,ಬಂಟ್ವಾಳ- 2,15,710,
ಪುತ್ತೂರು-2,04,181,
ಮೂಡಬಿದ್ರೆ-1,97,712 ಮತದಾರರಿದ್ದಾರೆ.
ಮತದಾರರ ಪಟ್ಟಿಯ ನಿರಂತರ ಪರಿಷ್ಕರಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇನ್ನು ಮುಂದೆ ಕೂಡ ಅರ್ಹ ನಾಗರಿಕರು ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಉಪಸ್ಥಿತರಿದ್ದರು.









