ಸುಳ್ಯ:ಕೇರಳ- ಕರ್ನಾಟಕ ಸಂಪರ್ಕಿಸುವ ಕಾಞಂಗಾಡ್- ಕಾಣಿಯೂರು ರೈಲ್ವೇ ಯೋಜನೆಯ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುತ್ತೇನೆ.ಈ ಯೋಜನೆಯ ಸಾಧ್ಯತೆಗಳ ಬಗ್ಗೆ ರೈಲ್ವೇ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಸುಳ್ಯಕ್ಕೆ ಆಗಮಿಸಿದ ಅವರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.ಯೋಜನೆಯ ಬಗ್ಗೆ
ಹೆಚ್ಚು ಮಾಹಿತಿ ಪಡೆದು ಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲಾಗುವುದು ಬಳಿಕ ರೈಲ್ವೇ ಸಚಿವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು. ಕಾಞಂಗಾಡ್-ಕಾಣಿಯೂರು ರೈಲ್ವೇ ಯೋಜನೆಯ ಬಗ್ಗೆ ಬಿಜೆಪಿ ಮುಖಂಡ ಎ.ವಿ.ತೀರ್ಥರಾಮ ಪ್ರಸ್ತಾಪಿಸಿದರು. ಈ ಹಿಂದೆ ಭಾರೀ ಸದ್ದು ಮಾಡಿದ್ದ ಯೋಜನೆ ಈಗ ನೆನೆಗುದಿಗೆ ಬಿದ್ದಿದೆ. ಇದು ಅನುಷ್ಠಾನ ಆದರೆ ಸುಳ್ಯದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಇದು ಅನುಷ್ಠಾನ ಆಗಬೇಕು ಎಂಬುದು ಇಲ್ಲಿನ ಕಾರ್ಯಕರ್ತರ ಆಶಯ ಎಂದು ಅವರು ಹೇಳಿದರು.
ಸುಳ್ಯದ ಅಡಿಕೆ ಹಳದಿ ರೋಗ, ಎಲೆ ಚುಕ್ಕಿ ರೋಗದ ಸಮಸ್ಯೆಯ ಬಗ್ಗೆ ತಿಳಿದು ಕೊಂಡಿದ್ದೇನೆ. ಇದನ್ನು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತರುತ್ತೇನೆ.ಈ ಭಾಗದಲ್ಲಿ ಬೆಳೆಯುವ ಅಡಿಕೆ ಯೋಗ್ಯ ಬೆಳೆ ಹಾಗೂ ಹಾನಿಕಾರಕ ಅಲ್ಲಾ ಎಂಬುದನ್ನು ಮನವರಿಕೆ ಮಾಡಲಾಗುದು. ಮತ್ತು ಸಮಸ್ಯೆಯ ಪರಿಹಾರದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಚೌಟ ಹೇಳಿದರು.
ಸುಳ್ಯದ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಏನು ಮಾಡಬಹುದು ಎಂಬ ಬಗ್ಗೆ ಶಾಸಕರ ಜೊತೆ ಮಾತನಾಡಿ ಯೋಜನೆ ರೂಪಿಸುತ್ತೇವೆ ಎಂದರು. ಸುಳ್ಯದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಇದಕ್ಕಾಗಿ ಇನ್ಸುಲೇಟೆಡ್ ಕೇಬಲ್ ಅಳವಡಿಕೆಗೆ ಕೇಂದ್ರದಿಂದ ಅನುದಾನ ಇದ್ದಲ್ಲಿ ತರಿಸುವ ಪ್ರಯತ್ನ ಆಗಬೇಕು ಎಂದು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಹೇಳಿದರು.ಸುಳ್ಯದಲ್ಲಿ ಕೃಷಿ ಆಧಾರಿತ ಕೈಗಾರಿಕೆ ಸ್ಥಾಪನೆಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು, ಗ್ರಾಮೀಣ ಭಾಗದಲ್ಲಿ ನೆಟ್ ವರ್ಕ್ ಸಮಸ್ಯೆ ತೀವ್ರವಾಗಿದೆ. ಇದಕ್ಕಾಗಿ ಟವರ್ಗೆ ಸೋಲಾರ್ ಬ್ಯಾಟರಿ ಅಳವಡಿಸಬೇಕು ಎಂದು ವಿನಯಕುಮಾರ್ ಕಂದಡ್ಕ ಹೇಳಿದರು.
ಸುಳ್ಯದ ನೆಟ್ ವರ್ಕ್ ಸಮಸ್ಯೆ ಪತಿಹಾರದ ಬಗ್ಗೆ ಬಿಎಸ್ಎನ್ಎಲ್ ಹಾಗೂ ವಿವಿಧ ಖಾಸಗೀ ಮೊಬೈಲ್ ಸಂಸ್ಥೆಗಳ ಜೊತೆ ಸಭೆ ನಡೆಸಿ ಚರ್ಚೆ ನಡೆಸುತ್ತೇನೆ ಎಂದು ಸಂಸದರು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಉಪಸ್ಥಿತರಿದ್ದರು.