ಸುಳ್ಯ:ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ಶಿಪ್ ‘ಸುಳ್ಯ ಕಬಡ್ಡಿ ಉತ್ಸವ ಸಂಪನ್ನಗೊಂಡಿತು. ಪಂದ್ಯಾಟದಲ್ಲಿ ಬಿಪಿಸಿಎಲ್ ಮುಂಬೈ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್ನಲ್ಲಿ
ಬಿಪಿಸಿಎಲ್ ಮುಂಬೈ ತಂಡವು ಫ್ರೆಂಡ್ಸ್ ಕ್ಲಬ್ ಕಡಬ ತಂಡವನ್ನು 34-24 ಪಾಯಿಂಟ್ ಅಂತರದಲ್ಲಿ ಮಣಿಸಿ ಕಪ್ ಗೆದ್ದಿತು.ಚಾಂಪಿಯನ್ ಬಿಪಿಸಿಎಲ್ ತಂಡ ಒಂದು ಲಕ್ಷ ರೂ ನಗದು ಮತ್ತು ಟ್ರೋಫಿ ಪಡೆದುಕೊಂಡಿತು. ರನ್ನರ್ಸ್ ತಂಡ ಫ್ರೆಂಡ್ಸ್ ಕ್ಲಬ್ ಕಡಬ 70 ಸಾವಿರ ಹಾಗು ಟ್ರೋಫಿ ಪಡೆದುಕೊಂಡಿತು. ಸೆಮಿಫೈನಲ್ನಲ್ಲಿ

ಪರಾಭವಗೊಂಡ ಮುಂಬೈ ಪೋರ್ಟ್ ಹಾಗು ಸದರ್ನ್ ರೈಲ್ವೇ ತಂಡಗಳು ತಲಾ 35 ಸಾವಿರ ಹಾಗು ಟ್ರೋಫಿ ಪಡೆದುಕೊಂಡಿತು.
ಸುಳ್ಯದ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ಎರಡು ದಿನಗಳ ಕಬಡ್ಡಿ ಪಂದ್ಯಾಟದಲ್ಲಿ 12 ತಂಡಗಳು ಭಾಗವಹಿಸಿದ್ದರು. ಹಲವು ಮಂದಿ ರಾಷ್ಟ್ರೀಯ ಕಬಡ್ಡಿ ಆಟಗಾರರು, ಪ್ರೊಕಬಡ್ಡಿ ಆಟಗಾರರು ಪಂದ್ಯಾಕೂಟದಲ್ಲಿ ಭಾಗವಹಿಸಿ ಎರಡು ದಿನಗಳ ಕಾಲ ಸುಳ್ಯದ ಕ್ರೀಡಾ ಪ್ರೇಮಿಗಳಿಗೆ ಕಬಡ್ಡಿಯ ರಸದೌತಣ ಉಣ ಬಡಿಸಿದ್ದರು.
ಪಂದ್ಯಾಟದ ಯಶಸ್ವಿಗೆ ನೇತೃತ್ವ ವಹಿಸಿದ ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಜಿ.ಪಿ.ಸಂಶುದ್ದೀನ್ ಅವರನ್ನು ಸನ್ಮಾನಿಸಲಾಯಿತು.










