ಸುಳ್ಯ:ಸುಳ್ಯ ನಗರದ ಪ್ರಮುಖ ರಸ್ತೆ, ದಿನಾಲು ನೂರಾರು ವಾಹನಗಳು ಓಡಾಡುವ, ಸಾವಿರಾರು ಜನರು ಪ್ರಯಾಣಿಸುವ ಹಳೆಗೇಟು-ಜಯ ನಗರ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ರಸ್ತೆಯಲ್ಲಿ ಸಂಚಾರವೇ ಸಾಧ್ಯವಿಲ್ಲದಂತಾಗಿದೆ. ಖಾಸಗೀ ವ್ಯಕ್ತಿಗಳು ಯಾರೋ ಮನೆಯ ಅಡಿಪಾಯಕ್ಕೆ ತೆಗೆದ ಮಣ್ಣನ್ನು ರಸ್ತೆ ಬದಿ ಸುರಿದ ಕಾರಣ ಈ ಆವಾಂತರ ಸೃಷ್ಠಿಯಾಗಿದೆ ಎಂದು ತಿಳಿದು ಬಂದಿದೆ. ಭಾನುವಾರ ಜಯನಗರ ರಸ್ತೆಯ ಬದಿಯಲ್ಲಿ ಅಲ್ಲಲ್ಲಿ ರಾಶಿ ರಾಶಿ ಮಣ್ಣು ಸುರಿದಿದ್ದು ಮಳೆಯೂ ಸುರಿದ
ಕಾರಣ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದೆ. ಸೋಮವಾರ ಬೆಳಗ್ಗಿನಿಂದ ಸಂಚಾರವೇ ಕಷ್ಟಕರವಾಗಿದೆ. ಕಾಂಕ್ರೀಟ್ ರಸ್ತೆ ಕೂಡ ಕೆಸರು ಗದ್ದೆಯಂತಾಗಿದ್ದು ಸಂಚಾರವೇ ದುಸ್ತರವಾಗಿದೆ. ಬೈಕ್, ಕಾರು, ರಿಕ್ಷಾ ಸೇರಿ ಯಾವುದೇ ವಾಹನಕ್ಕೆ ಓಡಾಡಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ರಸ್ತೆಯಲ್ಲಿ ನಡೆದಾಡಲೂ ಆಗದ ಪರಿಸ್ಥಿತಿ ಉಂಟಾಗಿದ್ದು ವಾಹನ ಅಪಘಾತಗಳು ಉಂಟಾಗುತಿದೆ. ದ್ವಿಚಕ್ರ ವಾಹನಗಳು ಪಲ್ಟಿ ಹೊಡೆಯುತಿವೆ.ವಾಹನ ಸವಾರರ ಮೇಲೆ, ಪಾದಯಾತ್ರಿಕರ ಮೇಲೆ ಕೆಸರರು ಸಿಂಪಡಣೆಯಾಗುತಿದೆ.

ಮೊದಲೇ ಜಯನಗರ ರಸ್ತೆ ಸಂಪೂರ್ಣ ಹೊಂಡ ಮಯವಾಗಿದ್ದು ಕೆಸರು, ನೀರು ಮಣ್ಣು ತುಂಬಿ ಸಂಚಾರ ಕಷ್ಟಕರವಾಗಿದೆ. ಇದೀಗ ಮತ್ತೆ ರಸ್ತೆ ಬದಿಯಲ್ಲಿ ಮಣ್ಣು ತುಂಬಿರುವುದರಿಂದ ರಸ್ತೆ ಪೂರ್ತಿ ಕೆಸರು ತುಂಬಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರಸ್ತೆಯು ಈ ರೀತಿ ಆಗಿರುವುದರಿಂದ ಪ್ರಯಾಣಿಕರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ರಸ್ತೆಯ ದುಸ್ಥಿತಿಯ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರು ಹೇಳಿದ್ದಾರೆ. ಪೈಪ್ ಲೈನ್ ಅಳವಡಿಕೆಗೆಂದು ಒಮ್ಮೆ ರಸ್ತೆ ಬದಿ ಕಡಿದು ಹಾಕಿ ರಸ್ತೆ ಕೆಸರುಮಯವಾಗಿತ್ತು. ಮಳೆಗೆ ಆ ಕೆಸರೆಲ್ಲ ತೊಳೆದು ಹೋಗಿ ಸ್ವಲ್ಪ ಮಟ್ಟಿಗೆ ಸರಿಯಾಗಿತ್ತು. ಇದೀಗ ಮತ್ತೆ ಮಣ್ಣು ಸುರಿದು ರಸ್ತೆ ಎಕ್ಕುಟ್ಟಿ ಹೋಗುವಂತಾಗಿದೆ.

ಕ್ರಮಕ್ಕೆ ಸೂಚನೆ:ನ.ಪಂ.ಅಧ್ಯಕ್ಷೆ
ರಸ್ತೆಯು ಕೆಸರು ರಸ್ತೆಯಾಗಿರುವ ಬಗ್ಗೆ ದೂರು ಬಂದಿರುವ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ನಗರ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮನೆಯ ಫೌಂಡೇಶನ್ ಮಣ್ಣು ತೆಗೆದದ್ದು ಯಾರೂ ವ್ಯಕ್ತಿಗಳು ರೋಡಿಗೆ ಹಾಕಿದ್ದಾರೆ. ನಗರ ಪಂಚಾಯತ್ ಅಧಿಕಾರಿಗಳು ಪರಿಶೀಲನೆ ನಡೆಸಿ ನೋಟಿಸ್ ನೀಡಲಾಗಿದೆ.ಮಣ್ಣನ್ನು ತೆಗೆಸಬೇಕು ಎಂದು ಸೂಚಿಸಲಾಗಿದೆ ಎಂದು ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ ತಿಳಿಸಿದ್ದಾರೆ.