ಐವರ್ನಾಡು:ಮುಂಬರುವ ದಿನಗಳಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ರೂಪುಗೊಂಡರೆ ಆಗ ಎಸ್.ಎನ್ ಮನ್ಮಥ ಅವರು ಇಲ್ಲಿನ ಶಾಸಕರಾಗಿ ಆಯ್ಕೆಯಾಗವೇಕು ಎಂದು ಹಿರಿಯ ಬಿಜೆಪಿ ಮುಖಂಡ ಹಾಗೂ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ಆಶಯ ವ್ಯಕ್ತಪಡಿಸಿದ್ದಾರೆ. ಐವರ್ನಾಡು ಪ್ರಾಥಮಿಕ ಕೃಪಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಸ್. ಎನ್. ಮನ್ಮಥ ಹಾಗೂ ಉಪಾಧ್ಯಕ್ಷರಾಗಿ ಮಹೇಶ್ ಜಬಳೆ ಅವರನ್ನು
ಅಭಿನಂದಿಸಿ ಅವರು ಮಾತನಾಡಿದರು. ಹಿಂದೆ ಐವರ್ನಾಡಿನಲ್ಲಿ ರಾಜಕೀಯ ಇರಲಿಲ್ಲ. ಈಗ ಸ್ವಲ್ಪ ಇದೆ. ಅದು ಇರಬಾರದು. ದಿ. ಎಂ.ಎನ್.ಬಾಲಕೃಷ್ಣ ಗೌಡ ಅವರ ದೂರದೃಷ್ಟಿತ್ವದ ಫಲವಾಗಿ ಐವರ್ನಾಡು ದಶ ದಿಕ್ಕಿನಲ್ಲಿ ಬೆಳೆದು ನಿಂತಿದೆ. ಅವರ ಆದರ್ಶ ನಮಗೆಲ್ಲ ಪ್ರೇರಣೆಯಾಗಲಿ ಎಂದ ಎನ್.ಎ.ರಾಮಚಂದ್ರ ‘ಎಸ್.ಎನ್ ಮನ್ಮಥ ನೇತೃತ್ವದ ಆಡಳಿತ ಮಂಡಳಿಯು ಕಳೆದ ಹತ್ತು ವರ್ಷಗಳಿಂದ ಅತ್ಯುತ್ತಮ ಆಡಳಿತ ನೀಡಿದೆ. ಈ ಹಿನ್ನೆಲೆಯಲ್ಲಿ ಕೃಷಿಕ ಸಮಾಜ ಈ ಚುನಾವಣೆಯಲ್ಲಿ ಆಶೀರ್ವಾದ ಮಾಡಿದೆ. ನೂತನ ಆಡಳಿತ ತಂಡವೂ ಕೃಷಿಕ ಸಮುದಾಯದ ಅಗತ್ಯತೆಗಳಿಗೆ ಸ್ಪಂದಿಸುವ ಮೂಲಕ ಐವರ್ನಾಡು
ಮಾದರಿ ಸೊಸೈಟಿಯಾಗಿ ಗುರುತಿಸಿಕೊಳ್ಳಲಿದೆ ಎಂದರು.
ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಇಲ್ಲ. ರಾಜಕೀಯ ರಹಿತವಾಗಿ ಮುನ್ನಡೆಸಬೇಕಾದ ಸಂಸ್ಥೆ ಇದು. ಸಹಕಾರ ಕ್ಷೇತ್ರದಲ್ಲಿ ಸಹಕಾರಿ ಮನೋಭಾವನೆ ಬೇಕು. ಸೋತವರು, ಗೆದ್ದವರೂ ಎಂಬ ಬೇಧಭಾವ ಇಲ್ಲ. ಎಲ್ಲರೂ ಜತೆಯಾಗಿ ಸಾಗಬೇಕು. ಎಲ್ಲರೂ ಒಗ್ಗೂಡಿಸಿಕೊಂಡು ಮುನ್ನಡೆಯುವ ಸಾಮರ್ಥ್ಯ ಐವರ್ನಾಡು ಸೊಸೈಟಿಯ ಆಡಳಿತ ಮಂಡಳಿಗೆ ಇದೆ. ಈ ಸಂಘ ರಾಷ್ಟ್ರ ಪ್ರಶಸ್ತಿ ಸಿಗುವ ಹಂತಕ್ಕೆ ಬೆಳೆಯಲಿ ಎಂದು ಎನ್.ಎ.ರಾಮಚಂದ್ರ ಹೇಳಿದರು.

ನೂತನ ಅಧ್ಯಕ್ಷ ಎಸ್.ಎನ್ ಮನ್ಮಥ ಮಾತನಾಡಿ, ಸಹಕಾರ ಸಂಸ್ಥೆ ಕೃಷಿಕರ ಏಳಿಗೆಗಾಗಿ ಇರುವ ಸಂಸ್ಥೆ. ಅದರಂತೆ ಐವರ್ನಾಡು ಸೊಸೈಟಿ ಕೃಷಿಕ ಸಮುದಾಯದ ಪರವಾಗಿ ನಿರಂತರ ಕಾರ್ಯಕ್ರಮ ಅನುಷ್ಠಾನಿಸುತ್ತಾ ಬಂದಿದೆ. ಕೊವೀಡ್ ಕಾಲದಲ್ಲಿಯು ಜನರೊಂದಿಗೆ ಕೊಂಡಿಯಾಗಿ, ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ ಜಿಲ್ಲೆಯಲ್ಲಿಯೇ ಮಾದರಿಯಾಗಿ ಗುರುತಿಸಿಕೊಂಡಿತ್ತು. ಕೃಷಿಕ ಸಮುದಾಯದ ನಂಬಿಕೆಗೆ ತಕ್ಕಂತೆ ಮತ್ತಷ್ಟು ಕೃಷಿಪರ ಕಾರ್ಯಕ್ರಮ ರೂಪಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾಜಿ ನಿರ್ದೇಶಕ ಮಾಧವ ಭಟ್ ಶೃಂಗೇರಿ ಐವರ್ನಾಡು ಶುಭ ಹಾರೈಸಿದರು. ಗ್ರಾ.ಪಂ.ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಮಾಜಿ ಸದಸ್ಯರಾದ ಶಾಂತರಾಮ ಕಣಿಲೆಗುಂಡಿ, ಶೇಖರ ಮಡ್ತಿಲ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ:
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಎಸ್. ಎನ್. ಮನ್ಮಥ ಹಾಗೂ ಉಪಾಧ್ಯಕ್ಷರಾಗಿ ಮಹೇಶ್ ಜಬಳೆ ಅವಿರೋಧವಾಗಿ ಆಯ್ಕೆಯಾದರು. ಸಂಘದಸಭಾಂಗಣದಲ್ಲಿ ಡಿ.31 ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್. ಅವರು ಚುನಾವಣಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಧಿಕಾರಿ ದೀಕ್ಷಿತ್ ಎಂ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಅನಂತಕುಮಾರ್ ಖಂಡಿಗೆಮೂಲೆ, ಸತೀಶ ಎಡಮಲೆ, ನಟರಾಜ ಎಸ್, ರವಿನಾಥ ಎಂ.ಎಸ್., ಚಂದ್ರಶೇಖರ, ಪುರಂದರ ಎಸ್., ಭವಾನಿ ಎಂ.ಸಿ., ದಿವ್ಯಾ ರಮೇಶ್ ಮಿತ್ತಮೂಲೆ, ಮಧುಕರ ಎನ್ ಉಪಸ್ಥಿತರಿದ್ದರು.