ಹೈದರಾಬಾದ್:ಇಂಡಿಯನ್ ಪ್ರೀಮಿಯರ್ ಲೀಗ್ನ 18ನೇ ಆವೃತ್ತಿಯಲ್ಲಿ ಭಾನುವಾರ ಹಾಲಿ ರನ್ನರ್ಸ್ ಅಪ್ ಸನ್ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ತವರಿನಲ್ಲಿ ಅಭಿಯಾನ ಆರಂಭಿಸಲಿದೆ.ಇನ್ನೊಂದು ಪಂದ್ಯದಲ್ಲಿ ತಲಾ ಐದು ಸಲ ಪ್ರಶಸ್ತಿ ಜಯಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಭಾನುವಾರ ಮುಖಾಮುಖಿಯಾಗಲಿವೆ.
ಎಸ್ಆರ್ಎಚ್ ತಂಡವು
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರಂತಹ ಸ್ಫೋಟಕ ಬ್ಯಾಟ್ಸ್ಮನ್ಗಳನ್ನು ಒಳಗೊಂಡಿದೆ. ಅನುಭವಿ ವೇಗಿಗಳಾದ ನಾಯಕ ಪ್ಯಾಟ್ ಕಮಿನ್ಸ್, ಮೊಹಮ್ಮದ್ ಶಮಿ, ಸ್ಪಿನ್ನರ್ ಆ್ಯಡಂ ಜಂಪಾ ಅವರು ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದಾರೆ.
ಬೆರಳಿನ ಗಾಯದಿಂದ ಚೇತರಿಸಿಕೊಂಡಿರುವ ಕಾಯಂ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಕೀಪಿಂಗ್ ಹೊಣೆ ನಿಭಾಯಿಸದಿರುವಂತೆ ಬಿಸಿಸಿಐ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ತಂಡವನ್ನು ಮೊದಲು ಮೂರು ಪಂದ್ಯಗಳಲ್ಲಿ ರಿಯಾನ್ ಪರಾಗ್ ಮುನ್ನಡೆಸಲಿದ್ದಾರೆ. ಈ ಪಂದ್ಯದಲ್ಲಿ ಸಂಜು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದರೆ ಆಶ್ಚರ್ಯವಿಲ್ಲ. ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ನಿತೀಶ್ ರಾಣಾ ಮತ್ತು ಯಶಸ್ವಿ ಜೈಸ್ವಾಲ್ ಅವರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಪಂದ್ಯ ಆರಂಭ ಅಪರಾಹ್ನ 3.30ಕ್ಕೆ.
ಋತುರಾಜ್ ಗಾಯಕವಾಡ ನಾಯಕತ್ವದ ಚೆನ್ನೈ ತಂಡವು ತನ್ನ ಸ್ಪಿನ್ ವಿಭಾಗದ ಮೇಲೆ ಹೆಚ್ಚು ವಿಶ್ವಾಸ ಇಟ್ಟುಕೊಂಡಿದೆ. ನಾಯಕ ಋತುರಾಜ್, ರಾಹುಲ್ ತ್ರಿಪಾಠಿ, ಡೆವೊನ್ ಕಾನ್ವೆ ಹಾಗೂ ಮಹೇಂದ್ರಸಿಂಗ್ ಧೋನಿ ಅವರು ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಸ್ಯಾಮ್ ಕರನ್, ಖಲೀಲ್ ಅಹಮದ್ ಹಾಗೂ ಮಥಿಷ್ ಪಥಿರಾಣಾ ವೇಗದ ವಿಭಾಗವನ್ನು ನಿರ್ವಹಿಸುವುದು ಖಚಿತ.
ಮುಂಬೈ ತಂಡದ ಬೌಲಿಂಗ್ ಶಕ್ತಿ ಜಸ್ಪ್ರೀತ್ ಬೂಮ್ರಾ ಕಣಕ್ಕಿಳಿಯುವುದು ಖಚಿತವಾಗಿಲ್ಲ. ಆದ್ದರಿಂದ ನಾಯಕ ಹಾರ್ದಿಕ್ ಅವರು ಈ ಪಂದ್ಯದಲ್ಲಿ ಆಡುತ್ತಿಲ್ಲ. ಆದ್ದರಿಂದ ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸುವರು. ಇದರಿಂದಾಗಿ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್, ದೀಪಕ್ ಚಾಹರ್ ಅವರ ಮೇಲೆ ಅವಲಂಬಿತವಾಗಬಹುದು. ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಪ್ರಮುಖರಾಗಿದ್ದಾರೆ. ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಸೂರ್ಯ, ರೋಹಿತ್, ತಿಲಕ್ ವರ್ಮಾ, ರಿಯಾನ್ ರಿಕೆಲ್ಟನ್ ಅವರು ಅಬ್ಬರಿಸುವ ನಿರೀಕ್ಷೆ ಇದೆ. ಪಂದ್ಯ ಆರಂಭ ಸಂಜೆ 7.30ಕ್ಕೆ