ಲಖನೌ: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನೊಂದಿಗೆ ಲೀಗ್ ಹಂತದ ಪಂದ್ಯಗಳಿಗೆ ತೆರೆ ಬಿದ್ದಿದೆ. ನಾಳೆಯಿಂದ (ಮೇ.29) ಪ್ಲೇ ಆಫ್ ಪಂದ್ಯಗಳು ನಡೆಯಲಿದೆ. ಪ್ಲೇ ಆಫ್ಗೆ ಪಂಜಾಬ್ ಕಿಂಗ್ಸ್,ರಾಯಲ್ ಚಾಲೆಂಜರ್ಸ್ ಬೆಂಗಳೂರು,ಗುಜರಾತ್ ಟೈಟನ್ಸ್,ಮುಂಬೈ ಇಂಡಿಯನ್ಸ್.
ಪ್ರವೇಶಿಸಿದೆ.ಈ ಪೈಕಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಚೊಚ್ಚಲ ಕಿರೀಟ ಎತ್ತುವ ತವಕದಲ್ಲಿದೆ. ಮುಂಬೈ ಇಂಡಿಯನ್ಸ್ ಐದು ಬಾರಿ ಹಾಗೂ ಗುಜರಾತ್ ಟೈಟನ್ಸ್ ಒಂದು ಸಲ ಟ್ರೋಫಿ ಗೆದ್ದಿದೆ.ಅಂಕಪಟ್ಟಿಯಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು 29ರಂದು ಚಂಡೀಗಢದಲ್ಲಿ ನಡೆಯುವ ಮೊದಲ ಕ್ವಾಲಿಫೈಯರ್ನಲ್ಲಿ ಎದುರಾಗಲಿವೆ.ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ಗೆ ಪ್ರವೇಶಿಸಲಿದೆ. ಸೋತ ತಂಡ ಎರಡನೇ ಕ್ವಾಲಿಫೈಯರ್ನಲ್ಲಿ ಎಲಿಮಿನೇಟರ್ ವಿಜೇತ ತಂಡವನ್ನು ಎದುರಿಸಬೇಕಾಗುತ್ತದೆ.
ಶುಕ್ರವಾರ ಚಂಡೀಗಢದಲ್ಲೇ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿಯಾಗಲಿವೆ.ಜೂನ್ 1ರಂದು ಅಹಮದಾಬಾದ್ನಲ್ಲಿ ಎರಡನೇ ಕ್ವಾಲಿಫೈಯರ್ ಪಂದ್ಯ ನಿಗದಿಯಾಗಿದೆ. ಜೂನ್ 3ರಂದು ಫೈನಲ್ ಪಂದ್ಯಕ್ಕೆ ಅಹಮದಾಬಾದ್ ವೇದಿಕೆಯಾಗಲಿದೆ.
ಆರ್ಸಿಬಿ ಈ ಗೆಲುವಿನೊಂದಿಗೆ ಆಡಿರುವ 14 ಪಂದ್ಯಗಳಲ್ಲಿ ಒಂಬತ್ತು ಗೆಲುವು ಹಾಗೂ ನಾಲ್ಕು ಸೋಲಿನೊಂದಿಗೆ 19 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ಮೊದಲ ಕ್ವಾಲಿಫೈಯರ್ಗೆ ಅರ್ಹತೆ ಗಿಟ್ಟಿಸಿಕೊಂಡಿತು.ಪಂಜಾಬ್ ಕಿಂಗ್ಸ್ ಅಷ್ಟೇ ಅಂಕಗಳನ್ನು ಹೊಂದಿದ್ದರೂ ಉತ್ತಮ ರನ್ರೇಟ್ ಆಧಾರದಲ್ಲಿ ಅಗ್ರಸ್ಥಾನ ಪಡೆಯಿತು. ಗುಜರಾತ್ 14 ಪಂದ್ಯಗಳಲ್ಲಿ 18 ಅಂಕಗಳೊಂದಿಗೆ ಮೂರನೇ ಸ್ಥಾನ ಹಾಗೂ ಮುಂಬೈ ಇಂಡಿಯನ್ಸ್ 14 ಪಂದ್ಯಗಳಲ್ಲಿ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆಯಿತು.
ಪ್ರಸಕ್ತ ಸಾಲಿನಲ್ಲಿ ತವನರಿನಾಚೆ ಆಡಿದ ಎಲ್ಲ ಏಳು ಪಂದ್ಯಗಳಲ್ಲಿ ಆರ್ಸಿಬಿ ಗೆಲುವು ದಾಖಲಿಸಿತು. ಇದು ಐಪಿಎಲ್ ಆವೃತ್ತಿಯೊಂದರಲ್ಲಿ ತಂಡವೊಂದರ ಶ್ರೇಷ್ಠ ದಾಖಲೆಯಾಗಿದೆ. 2012ರಲ್ಲಿ ಕೆಕೆಆರ್ ಎಂಟು ಪಂದ್ಯಗಳ ಪೈಕಿ ಏಳರಲ್ಲಿ ಗೆಲುವು ಸಾಧಿಸಿತ್ತು.ಈ ವರ್ಷ ಲಖನೌದಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸೋತರೂ ಅದು ಆರ್ಸಿಬಿ ಪಾಲಿಗೆ ತವರಿನ ಪಂದ್ಯವಾಗಿತ್ತು.