ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ ದಾಖಲೆಯ ಮೊತ್ತ ಬೆನ್ನಟ್ಟಿ ಭರ್ಜರಿ ಜಯ ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ಕ್ವಾಲಿಫೈಯರ್ಗೆ ಪ್ರವೇಶ ಪಡೆಯಿತು.ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ
ಲಖನೌ ತಂಡವು 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ಗಳ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಆರ್ಸಿಬಿ 18.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಹಂಗಾಮಿ ನಾಯಕ ಜಿತೇಶ್ ಶರ್ಮ ಸ್ಪೋಟಕ ಇನ್ನೀಂಗ್ಸ್, ವಿರಾಟ್ ಕೊಹ್ಲಿ ಅರ್ಧ ಶತಕ, ಮಾಯಾಂಕ್ ಅಗರ್ವಾಲ್, ಫಿಲ್ ಸಾಲ್ಟ್ ಉತ್ತಮ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ ಅತೀ ದೊಡ್ಡ ಮೊತ್ತ ಬೆನ್ನಟ್ಟಿ ಗೆಲುವು ದಾಖಲಿಸಲು ನೆರವಾಯಿತು.ಈ ಗೆಲುವಿನೊಂದಿಗೆ ಆರ್ಸಿಬಿ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಎರಡರಲ್ಲಿ ಸ್ಥಾನ ಪಡೆಯಿತು.
ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಲಾ 19 ಅಂಕಗಳಿಸಿದ್ದು ರನ್ ರೇಟ್ ಆಧಾರದಲ್ಲಿ ಪಂಜಾಬ್ ಮೊದಲ ಸ್ಥಾನ ಪಡೆದರೆ, ಆರ್ಸಿಬಿ ದ್ವಿತೀಯ ಸ್ಥಾನ ಪಡೆಯಿತು. 29ರಂದು ಮೊದಲ ಕ್ವಾಲಿಫೈಯರ್ನಲ್ಲಿ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿದೆ. 18 ಅಂಕ ಪಡೆದ ಗುಜರಾತ್ ಮೂರನೇ ಸ್ಥಾನ
ಹಾಗೂ 16 ಅಂಕ ಗಳಿಸಿದ ಮುಂಬೈ ನಾಲ್ಕನೇ ಸ್ಥಾನದಲ್ಲಿದೆ. ಗುಜರಾತ್ ಹಾಗೂ ಮುಂಬೈ ಮೊದಲ ಎಲಿಮಿನೇಟರ್ನಲ್ಲಿ ಮುಖಾಮುಖಿಯಾಗಲಿದೆ.2016ರ ನಂತರ ಆರ್ಸಿಬಿ ಮೊದಲ ಬಾರಿ ಕ್ವಾಲಿಫೈಯರ್–1ಕ್ಕೆ ಅರ್ಹತೆ ಪಡೆದಿದೆ.ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್–1ರಲ್ಲಿ ಆಡಲಿವೆ. ಗೆದ್ದ ತಂಡ ನೇರವಾಗಿ ಫೈನಲ್ ತಲುಪುತ್ತದೆ. ಸೋತ ತಂಡ ಕ್ವಾಲಿಫೈಯರ್–2ರಲ್ಲಿ ಎಲಿಮಿನೇಟರ್ ಪಂದ್ಯದ ವಿಜೇತರನ್ನು ಎದುರಿಸಬೇಕಾಗುತ್ತದೆ. ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ನಲ್ಲಿ ಮುಖಾಮುಖಿಯಾಗಲಿವೆ.
ಆರ್ಸಿಬಿ ಪರ ನಾಯಕನ ಆಟ ಆಡಿದ ಜಿತೇಶ್ ಶರ್ಮ ಕೇವಲ 33 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 85 ರನ್ ಗಳಿಸಿದರು. ಉತ್ತಮ ಸಾಥ್ ನೀಡಿದ ಮಾಯಾಂಕ್ ಅಗರ್ವಾಲ್ 23 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ ಅಜೇಯ 41 ರನ್ ಗಳಿಸಿದರು. ಜಿತೇಶ್ ಶರ್ಮ ಹಾಗೂ ಅಗರ್ವಾಲ್ ಮುರಿಯದ 5ನೇ ವಿಕೆಟ್ಗೆ ಕೇವಲ 44 ಎಸೆತಗಳಲ್ಲಿ 105 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಬೃಹತ್ ಮೊತ್ತ ಬೆನ್ನಟ್ಟಿದ ಆರ್ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಸ್ಪೋಟಕ ಆರಂಭ ನೀಡಿದರು. ಮೊದಲ ವಿಕೆಟ್ 5.4 ಓವರ್ಗಳಲ್ಲಿ 61 ರನ್ ಬಾರಿಸಿದರು. ಕೊಹ್ಲಿ 30 ಎಸೆತಗಳಲ್ಲಿ 10 ಬೌಂಡರಿ ನೆರವಿನಿಂದ 54 ರನ್ ಬಾರಿಸಿದರು.ಫಿಲ್ ಸಾಲ್ಟ್ 19 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 30 ರನ್ ಬಾರಿಸಿದರು.
ಲಖನೌ ಪರ ನಾಯಕ ರಿಷಭ್ ಪಂತ್ ಔಟಾಗದೆ 61 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್ ಸಹಿತ ಅಮೋಘ ಶತಕ (118 ರನ್) ಸಾಧನೆ ಮಾಡಿದರೆ, ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಅವರು 37 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಿತ 67 ರನ್ ಗಳಿಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.
ಆರ್ಸಿಬಿ ಪರ ಭುವನೇಶ್ವರ ಕುಮಾರ್, ನುವಾನ್ ತುಷಾರ, ರೊಮಾರಿಯೊ ಶೆಫರ್ಡ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.