ಗುವಾಹಟಿ: ಭಾನುವಾರ ರಾತ್ರಿ ನಡೆಯಬೇಕಿದ್ದ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಪಡೆಯುವ ರಾಜಸ್ಥಾನದ ಗುರಿ ಈಡೇರಲಿಲ್ಲ. ಟೂರ್ನಿಯ ಕೊನೆಯ ಲೀಗ್ ಪಂದ್ಯ ಇದಾಗಿತ್ತು. ಇದೇ 22ರಂದು ಅಹಮದಾಬಾದಿನಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ರಾಜಸ್ಥಾನ ರಾಯಲ್ಸ್ ಎದುರಿಸಲಿದೆ. ಆರ್ಸಿಬಿ ಅಂಕಪಟ್ಟಿಯ ನಾಲ್ಕನೇ ಸ್ಥಾನದಲ್ಲಿದೆ.
ಅಗ್ರಸ್ಥಾನದಲ್ಲಿರುವ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಎರಡನೇ ಸ್ಥಾನದಲ್ಲಿರುವ ಸನ್ರೈಸರ್ಸ್ ಹೈದರಾಬಾದ್ ತಂಡಗಳು 21ರಂದು ನಡೆಯುವ ಮೊದಲ ಕ್ವಾಲಿಫೈಯರ್ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್ನಲ್ಲಿ ಜಯಿಸಿದ ತಂಡವು 24ರಂದು ಚೆನ್ನೈನಲ್ಲಿ ನಡೆಯುವ ಎರಡನೇ ಕ್ವಾಲಿಫೈಯರ್ನಲ್ಲಿ ಹಣಾಹಣಿ ನಡೆಸಲಿವೆ. 26ರಂದು ಫೈನಲ್ ನಡೆಯಲಿದೆ.
ರಾಜಸ್ಥಾನ ತಂಡಕ್ಕೆ ಎರಡನೇ ಸ್ಥಾನ ಪಡೆಯಲು ಈ ಪಂದ್ಯದ ಗೆಲುವು ಮುಖ್ಯವಾಗಿತ್ತು. ಆದರೆ ಸಂಜೆಯಿಂದಲೇ ಮಳೆ ಸುರಿಯಲು ಆರಂಭವಾಯಿತು. ಇದಕ್ಕಿಂತ ಮೊದಲು ಪಂಜಾಬ್ ತಂಡವನ್ನು ಮಣಿಸಿದ ಸನ್ ರೈಸರ್ಸ್ ಹೈದರಾಬಾದ್ 17 ಅಂಕ ಪಡೆದು ದ್ವಿತೀಯ ಸ್ಥಾನಿಯಾಯಿತು.ರಾಜಸ್ಥಾನ ಕೂಡ 17 ಅಂಕ ಪಡೆದಿದ್ದರೂ ಉತ್ತಮ ರನ್ ರೇಟ್ ಆಧಾರದಲ್ಲಿ ಹೈದರಾಬಾದ್ ದ್ವಿತೀಯ ಸ್ಥಾನ ಪಡೆಯಿತು.