ಸುಳ್ಯ:ಶರೀರದ ನರಗಳ ಅಸ್ವಸ್ಥತೆಗಳ ಹಾಗೂ ಮಾನಸಿಕ ಅಸೌಖ್ಯದ ನಿಯಂತ್ರಣದ ಬಗ್ಗೆ ಚೀನಾ ಸರಕಾರದ ವಾಣೀಜ್ಯ ಸಚಿವಾಲಯವು ಏರ್ಪಡಿಸಿರುವ ಅಂತಾರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಭಾಗವಹಿಸಲು ಸುಳ್ಯದ ಮನಶ್ಶಾಸ್ತ್ರಜ್ಞ ಅಕ್ಷರ ದಾಮ್ಲೆ ಆಮಂತ್ರಿತರಾಗಿದ್ದಾರೆ. ಜೂನ್ 12 ರಿಂದ ಹತ್ತು ದಿನಗಳ ಕಾಲ ನಡೆಯುವ ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಅರ್ಹರ ಆಯ್ಕೆಗಾಗಿ
ಸಲ್ಲಿಸಲ್ಪಟ್ಟ ಪ್ರೊಫೈಲ್ ಗಳಲ್ಲಿ
ಭಾರತದಿಂದ ಅಕ್ಷರ ದಾಮ್ಲೆಯವರು ಪರಿಗಣಿ ಸಲ್ಪಟ್ಟಿದ್ದಾರೆ. ಅವರು ಬೆಂಗಳೂರಿನ ಕೊಳೆಗೇರಿಗಳಲ್ಲಿ ಮಾನಸಿಕ
ಅಸ್ವಸ್ಥತೆಯ ನಿವಾರಣೆಗಾಗಿ ಕೈಗೊಂಡ ಸೇವಾಕಾರ್ಯಗಳು ಹಾಗೂ ೨೦೨೦ ರಲ್ಲಿ ಕೋವಿಡ್ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ಗಳ ಮನೋಸ್ಥೈರ್ಯ ತುಂಬುವ ಕೆಲಸ ಮಾಡಿದ್ದು ಅವರ ಇಂಗ್ಲಿಷ್ ಲೇಖನಗಳು ಹಾಗೂ ಉಪನ್ಯಾಸಗಳ ಕೊಡುಗೆಗಳನ್ನು ಆಯ್ಕೆ ಸಮಿತಿಯು ಪರಿಗಣಸಿದೆ. ಕಳೆದ ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಮಾನಸಿಕ ಚಿಕಿತ್ಸೆಯ “ಮನೋಸಂವಾದ” ಸಂಸ್ಥೆಯನ್ನು ಸ್ಥಾಪಿಸಿರುವ ಅವರ ಆತಿಥ್ಯವನ್ನು ಹಾಗೂ ಪ್ರಯಾಣ ವೆಚ್ಚಗಳನ್ನು ಚೀನಾ ಸರಕಾರವೇ ಭರಿಸಲಿದೆ. ಚೀನಾದ ರಾಜಧಾನಿ ಬೀಜಿಂಗ್ಗೆ
ಸಮೀಪವಿರುವ ಅಕಾಡೆಮಿ ಆಫ್ ಇಂಟರ್ನ್ಯಾಷನಲ್ ಬಿಝಿನಸ್ ಕೇಂದ್ರದಲ್ಲಿ ಜರಗಲಿರುವ ಈ ವಿಚಾರ ಸಂಕಿರಣದಲ್ಲಿ ವಿವಿಧ ದೇಶಗಳ ಮನಶ್ಶಾಸ್ತ್ರಜ್ಞರು ಭಾಗವಹಿಸಲಿದ್ದಾರೆ.