ಹೊಸದಿಲ್ಲಿ:ಟಿ20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡ ಬಾರ್ಬಡೋಸ್ ಗ್ರ್ಯಾಂಟ್ಲಿ ಆಡಮ್ಸ್ ಇಂಟರ್ ನ್ಯಾಷನಲ್ ಏರ್ಪೋರ್ಟ್ನ ಚಾರ್ಟರ್ಡ್ ವಿಮಾನದಲ್ಲಿ ತಾಯ್ನಾಡಿನತ್ತ ತನ್ನ ಪ್ರಯಾಣ ಆರಂಭಿಸಿದೆ.ಬಾರ್ಬಡೋಸ್ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಟಿ20 ವಿಶ್ವಕಪ್ ಜಯಿಸಿದ ನಂತರ ಚಂಡಮಾರುತದ ಹಿನ್ನೆಲೆಯಲ್ಲಿ
ಭಾರತ ಕ್ರಿಕೆಟ್ ತಂಡವು ಮೂರು ದಿನಗಳಿಂದ ವೆಸ್ಟ್ಇಂಡೀಸ್ನಲ್ಲಿ ಸಿಕ್ಕಿಹಾಕಿಕೊಂಡಿತ್ತು.ವಿಶ್ವಕಪ್ ವಿಜೇತ ಭಾರತೀಯ ತಂಡಕ್ಕೆ ನಿಯೋಜಿಸಲಾಗಿರುವ ವಿಶೇಷ ಏರ್ ಇಂಡಿಯಾ ಚಾರ್ಟರ್ಡ್ ವಿಮಾನ ಸ್ಥಳೀಯ ಸಮಯ ಬೆಳಗ್ಗೆ 4:50ರ ಸುಮಾರಿಗೆ ತನ್ನ ಹಾರಾಟ ಆರಂಭಿಸಿದ್ದು, ಗುರುವಾರ ಬೆಳಗ್ಗೆ 6:20ಕ್ಕೆ(ಭಾರತದ ಕಾಲಮಾನ)ಹೊಸದಿಲ್ಲಿಗೆ ತಲುಪುವ ನಿರೀಕ್ಷೆ ಇದೆ.
ಬಿಸಿಸಿಐ ವ್ಯವಸ್ಥೆ ಮಾಡಿರುವ ವಿಮಾನದಲ್ಲಿ ಭಾರತೀಯ ತಂಡ, ಸಹಾಯಕ ಸಿಬ್ಬಂದಿ, ಆಟಗಾರರ ಕುಟುಂಬಸ್ಥರು, ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಹಾಗೂ ಮಾಧ್ಯಮ ಸದಸ್ಯರುಗಳು ಇದ್ದಾರೆ.ಭಾರತವು ಸೋಮವಾರ ಬೆಳಗ್ಗೆ 11 ಗಂಟೆಗೆ ಬಾರ್ಬಡೋಸ್ನಿಂದ ಹೊರಡಬೇಕಾಗಿತ್ತು. ಆದರೆ ಚಂಡಮಾರುತ ಬೀಸಿದ ನಂತರ ತಂಡದ ಪ್ರಯಾಣದ ಯೋಜನೆ ಅಸ್ತವ್ಯಸ್ತವಾಯಿತು. ಪ್ರಬಲ ಚಂಡಮಾರುತದಿಂದಾಗಿ ಏರ್ಪೋರ್ಟ್ಗಳು ಹಾಗೂ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಲಾಗಿತ್ತು. ಭಾರತ ತಂಡವು ಕಳೆದ ಎರಡು ದಿನಗಳಿಂದ ಬಾರ್ಬಡೋಸ್ನಲ್ಲಿ ಸಿಲುಕಿಕೊಂಡಿತ್ತು.ವಿಶ್ವಕಪ್ ವಿಜೇತ ತಂಡದ ವಿಜಯೋತ್ಸವ ರೋಡ್ ಶೋ ಮುಂಬೈನಲ್ಲಿ ನಡೆಯಲಿದೆ.