ನ್ಯೂಯಾರ್ಕ್:ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾ ಮುಖಿಯಾಗಲಿವೆ.ಎ ಗುಂಪಿನಲ್ಲಿ ಪಾಕಿಸ್ತಾನ ತಂಡವು ಆತಿಥೇಯ ಅಮೆರಿಕದ ಎದುರು ಆಘಾತ ಅನುಭವಿಸಿದೆ. ಅದೇ ರೋಹಿತ್ ಶರ್ಮಾ ಬಳಗವು ತನ್ನ ಮೊದಲಪಂದ್ಯದಲ್ಲಿ ಐರ್ಲೆಂಡ್ ಎದುರು ಜಯಿಸಿತ್ತು.
ಪಂದ್ಯದ ಮುನ್ನಾದಿನದ ನೆಟ್ಸ್ ಅಭ್ಯಾಸದಲ್ಲಿ ಭಾರತ ತಂಡದ ಮೂವರು
ವೇಗಿಗಳಾದ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ಅವರು ಹೆಚ್ಚು ಹೊತ್ತು ಅಭ್ಯಾಸ ನಡೆಸಿದರು. ಹೆಚ್ಚುವರಿ ಬ್ಯಾಟರ್ ಆಗಿ ಯಶಸ್ವಿ ಜೈಸ್ವಾಲ್ ಅವರನ್ನು ಆಡಿಸುವ ಸಾಧ್ಯತೆ ಇದೆ. ಅದಕ್ಕಾಗಿ ಶಿವಂ ದುಬೆ ಅವರನ್ನು ಕೈಬಿಡಬಹುದು. ಇದರಿಂದಾಗಿ ರೋಹಿತ್ ಶರ್ಮಾ ಅವರು ಜೈಸ್ವಾಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿ, ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಬಹುದು. ನಂತರದ ಕ್ರಮಾಂಕಗಳಲ್ಲಿ ರಿಷಭ್ ಪಂತ್, ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಆಡುವುದು ಬಹುತೇಕ ಖಚಿತ.
ಆಲ್ರೌಂಡರ್ಗಳಾದ ಹಾರ್ದಿಕ್ ಪಸಂಡ್ಯ, ರವೀಂದ್ರ ಜಡೇಜ ಹಾಗೂ ಅಕ್ಷರ್ ಪಟೇಲ್ ಅವರಿಗೂ ಈ ಪಂದ್ಯದಲ್ಲಿ ಅವಕಾಶ ಸಿಗಬಹುದು. ಇದರಿಂದಾಗಿ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಈ ಸಂಯೋಜನೆಯಿಂದಾಗಿ 8ನೇ ಕ್ರಮಾಂಕದವರೆಗೂ ತಂಡದ ಬ್ಯಾಟಿಂಗ್ ಬಲ ಹೆಚ್ಚಲಿದೆ.
ಪಾಕ್ ತಂಡದ ನಾಯಕ ಬಾಬರ್ ಆಜಂ ಹಾಗೂ ಶಾದಾಬ್ ಖಾನ್ ಉತ್ತಮ ಲಯದಲ್ಲಿದ್ದಾರೆ. ನಸೀಂ ಶಾ, ಶಹೀನ್ ಶಹಾ ಆಫ್ರಿದಿ ಹಾಗೂ ಹ್ಯಾರಿಸ್ ರವೂಫ್ ಅವರ ಮುಂದೆ ವಿರಾಟ್, ರೋಹಿತ್ ಅವರ ಅಬ್ಬರಕ್ಕೆ ಕಡಿವಾಣ ಹಾಕುವ ಮಹತ್ವದ ಸವಾಲು ಇದೆ.
ಪಂದ್ಯ ಆರಂಭ: ರಾತ್ರಿ 8ರಿಂದ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಡಿಡಿ ಸ್ಪೋರ್ಟ್ಸ್, ಹಾಟ್ಸ್ಟಾರ್ ಆ್ಯಪ್.