ಲೀಡ್ಸ್: ಇಂದಿನಿಂದ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ನಡೆಯಲಿರುವ ತೆಂಡೂಲ್ಕರ್- ಆಂಡರ್ಸನ್ ಟ್ರೋಫಿ 5 ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಲಿದೆ.ಶುಭ್ಮನ್ ಗಿಲ್ ನಾಯಕನಾಗಿ ತಂಡವನ್ನು ಮೊದಲ ಬಾರಿ ಮುನ್ನಡೆಸುತ್ತಿದ್ದಾರೆ ಎಂಬ ವಿಶೇಷತೆ ಇದೆ.ಎರಡು ವರ್ಷಗಳ ಅವಧಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ಗೆ
ಇದು ಮೊದಲ ಸರಣಿಯಾಗಿದೆ. ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗು ರೋಹಿತ್ ಶರ್ಮ ನಿವೃತ್ತಿಯ ಬಳಿಕ ನಾಯಕತ್ವ ವಹಿಸಿಕೊಂಡ ಗಿಲ್ ಮುಂದೆ ಗೆಲುವಿನ ದೊಡ್ಡ ಸವಾಲು ಇದೆ. ಯುವ ಆಟಗಾರರು ಹೆಚ್ಚು ಸಂಖ್ಯೆಯಲ್ಲಿರುವ, ಕೆಲವೇ ಅನುಭವಿಗಳೂ ಇರುವ ತಂಡವನ್ನು ಗೆಲುವಿನ ಹಾದಿಗೆ ತರಬೇಕಾದ ಜವಾಬ್ದಾರಿ ಗಿಲ್ ಮೇಲಿದೆ.
ತಂಡದಲ್ಲಿ ಬ್ಯಾಟಿಂಗ್ ಕ್ರಮಾಂಕ ಯುವ ಮತ್ತು ಅನುಭವದ ಉತ್ತಮ ಮಿಶ್ರಣವನ್ನು ಹೊಂದಿದೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಅನುಭವಿಗಳಾದ ಕೆಎಲ್ ರಾಹುಲ್, ಗಿಲ್ ಮತ್ತು ರಿಷಭ್ ಪಂತ್ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.
ತಂಡದಲ್ಲಿರುವ ಶ್ರೇಷ್ಠ ಬೌಲರ್ಗಳಿಂದಾಗಿ ಗಿಲ್ ಆತ್ಮವಿಶ್ವಾಸ ಹೆಚ್ಚಿಸಿದೆ. ಇಂಗ್ಲೆಂಡ್ ತಂಡದಲ್ಲಿ ಅನುಭವಿ ಬೌಲರ್ಗಳು ಇಲ್ಲ. ಅದಕ್ಕೆ ಹೋಲಿಸಿದರೆ ಈ ವಿಭಾಗದಲ್ಲಿ ಭಾರತವೇ ಉತ್ತಮವಾಗಿದೆ. ವಿಶ್ವಶ್ರೇಷ್ಠ ವೇಗಿ ಜಸ್ಪ್ರೀತ್ ಬೂಮ್ರಾ, ಅವರಿಗೆ ಜೊತೆ ನೀಡಲಿರುವ ಮೊಹಮ್ಮದ್ ಸಿರಾಜ್, ಕನ್ನಡಿಗ ಪ್ರಸಿದ್ಧಕೃಷ್ಣ ತಂಡಕ್ಕೆ ಉತ್ತಮ ಆರಂಭ ನೀಡುವ ಛಲದಲ್ಲಿದ್ದಾರೆ. ಸ್ಪಿನ್ನರ್ಗಳಾದ ಅನುಭವಿ ರವೀಂದ್ರ ಜಡೇಜ ಮತ್ತು ಪ್ರಭಾವಿ ಸ್ಪಿನ್ನರ್ ಕುಲದೀಪ್ ಯಾದವ್ ಉತ್ತಮ ಲಯದಲ್ಲಿದ್ದಾರೆ.
ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ತಂಡಕ್ಕೆ ಉತ್ತಮ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ತಂಡಗಳು ಭಾರತ: ಶುಭಮನ್ ಗಿಲ್ (ನಾಯಕ) ರಿಷಭ್ ಪಂತ್ (ಉಪನಾಯಕ/ವಿಕೆಟ್ಕೀಪರ್) ಅಭಿಮನ್ಯು ಈಶ್ವರನ್ ಯಶಸ್ವಿ ಜೈಸ್ವಾಲ್ ಧ್ರುವ ಜುರೇಲ್ ಕರುಣ್ ನಾಯರ್ ಕೆ.ಎಲ್. ರಾಹುಲ್ ಸಾಯಿ ಸುದರ್ಶನ್, ರವೀಂದ್ರ ಜಡೇಜ ನಿತೀಶ್ ಕುಮಾರ್ ರೆಡ್ಡಿ ವಾಷಿಂಗ್ಟನ್ ಸುಂದರ್ ಆಕಾಶದೀಪ್ ಅರ್ಷದೀಪ್ ಸಿಂಗ್ ಜಸ್ಪ್ರೀತ್ ಬೂಮ್ರಾ ಹರ್ಷಿತ್ ರಾಣಾ ಕುಲದೀಪ್ ಯಾದವ್ ಮೊಹಮ್ಮದ್ ಸಿರಾಜ್ ಪ್ರಸಿದ್ಧಕೃಷ್ಣ ಶಾರ್ದೂಲ್ ಠಾಕೂರ್.
ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ) ಜೆಮಿ ಸ್ಮಿತ್ (ವಿಕೆಟ್ಕೀಪರ್) ಕ್ರಿಸ್ ವೋಕ್ಸ್ ಬ್ರೈಡಮನ್ ಕೇರ್ಸ್ ಜೋಶ್ ಟಂಗ್ ಶೋಯಬ್ ಬಶೀರ್ ಜ್ಯಾಕ್ ಕ್ರಾಲಿ ಬೆನ್ ಡಕೆಟ್ ಒಲಿ ಪೋಪ್ ಜೋ ರೂಟ್ ಹ್ಯಾರಿ ಬ್ರೂಕ್.
ಪಂದ್ಯ ಆರಂಭ: ಮಧ್ಯಾಹ್ನ 3.30 ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್