ಮಂಗಳೂರು: ಸಾಂಸ್ಕೃತಿಕ, ಶೈಕ್ಷಣಿಕವಾಗಿ ಹಲವು ಸಾಧ್ಯತೆಗಳಿಗೆ ಸಾಮರ್ಥ್ಯ ಹೊಂದಿರುವ ದ.ಕ. ಜಿಲ್ಲೆಯ ಗರಿಮೆಯನ್ನು ಮೇಲೆತ್ತುವ ಕೆಲಸ ಜಿಲ್ಲೆಯ ಜನರಿಂದ ಆಗಬೇಕು. ನನ್ನನ್ನು ಕುಡ್ಲ ಮನೆ ಮಗನಾಗಿ ಸ್ವೀಕರಿಸಿದೆ ಎಂಬ ಹೆಮ್ಮೆ ಇದೆ ಎಂದು ದ.ಕ. ಜಿಲ್ಲೆಯ ನಿರ್ಗಮನ ಜಿಲ್ಲಾಧಿಕಾರಿ ಮುಲ್ಲೈ ಮಗಿಲನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಪಡೀಲ್ನ
ಪ್ರಜಾಸೌಧ’ದ ಸಭಾಂಗಣದಲ್ಲಿ
ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.ದಕ್ಷಿಣ ಕನ್ನಡ ಜಿಲ್ಲೆ ಎಲ್ಲಾ ರೀತಿಯಲ್ಲೂ ನನಗೆ ವಿಶೇಷವಾಗಿ ಕಂಡಿದೆ. ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದ ಸಂದರ್ಭದಲ್ಲಿಯೂ ಲಿಫ್ಟ್ನಲ್ಲಿ ಒಬ್ಬರು ತುಳು ಮಾತನಾಡುವುದನ್ನು ಕಂಡಾಗ ನಾನು ಕೂಡಾ ಹೆಮ್ಮೆಯಿಂದ ಅವರಲ್ಲಿ ನಾನು ಕುಡ್ಲದ ಡಿಸಿ ಎಂದು ಪರಿಚಯಿಸಿಕೊಂಡೆ. ಅಷ್ಟೊಂದು ಇಲ್ಲಿನ ವಾತಾವರಣ ನನ್ನ ಮೇಲೆ ಪರಿಣಾಮ ಬೀರಿದೆ ಎಂದವರು ಹೇಳಿದರು.ತಮ್ಮ ಎರಡು ವರ್ಷಗಳ ಸೇವಾವಧಿಯಲ್ಲಿ ಏಳು ವರ್ಷಗಳಿಂದ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಬಾಕಿ ಇದ್ದ 650 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಪ್ರಾಕೃತಿಕ ವಿಕೋಪ ನಿರ್ವಹಣೆಯ ಅಧಿಕಾರವನ್ನು ಗ್ರಾಮ ಪಂಚಾಯತ್ ಹಾಗೂ ವಾರ್ಡ್ ಮಟ್ಟದ ಅಧಿಕಾರಿಗಳ ಮೂಲಕ ನಿರ್ವಹಿಸುವ ಕಾರ್ಯವೈಖರಿಯನ್ನು ರೂಪಿಸಲಾಗಿದೆ. 10000 ರೈತರಿಗೆ ಹಕ್ಕುಪತ್ರ ವಿತರಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ನೂತನ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್, ಮಾಜಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ದನ್, ಸ್ಮಾರ್ಟ್ ಸಿಟಿ ಆಡಳಿತ ನಿರ್ದೇಶಕ ರಾಜು, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಮೂಡಬಿದ್ರೆ ತಹಶೀಲ್ದಾರ್ ಶ್ರೀಧರ್, ಯತೀಶ್ ಬೈಕಂಪಾಡಿ ಮೊದಲಾದವರು ನಿರ್ಗಮನ ಜಿಲ್ಲಾಧಿಕಾರಿ ಜತೆಗಿನ ಒಡನಾಟವನ್ನು ಹಂಚಿಕೊಂಡರು.
ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.