ಲೀಡ್ಸ್: ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಶುಭಮನ್ ಗಿಲ್ ಸಿಡಿಸಿದ ಅಮೋಘ ಶತಕದ ನೆರವಿನಿಂದ ಟೀಮ್ ಇಂಡಿಯಾ, ಇಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನ ಬೃಹತ್ ಮೊತ್ತ ದಾಖಲಿಸಿದೆ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 85 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ
359 ರನ್ ಗಳಿಸಿದೆ. 127 ರನ್ ಗಳಿಸಿದ ಶುಭ್ಮನ್ ಗಿಲ್ ಹಾಗೂ 65 ರನ್ ಗಳಿಸಿದ ಉಪನಾಯಕ ರಿಷಬ್ ಪಂತ್ ಕ್ರೀಸಿನಲ್ಲಿದ್ದಾರೆ.
ಇಂಗ್ಲೆಂಡ್ ನೆಲದಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಜೈಸ್ವಾಲ್ ಶತಕ ಮಾಡಿದರೆ, ಗಿಲ್ ನಾಯಕನಾಗಿ ಮೊದಲ ಪಂದ್ಯದಲ್ಲೇ ಶತಕ ದಾಖಲಿಸಿದ್ದಾರೆ. ಜೈಸ್ವಾಲ್ 158 ಎಸೆತಗಳಲ್ಲಿ 16 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 101 ರನ್ ಬಾರಿಸಿದರೆ, ಗಿಲ್ 175 ಎಸೆತಗಳಲ್ಲಿ16 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 127 ರನ್ ಗಳಿಸಿದ್ದಾರೆ. ರಿಷಬ್ ಪಂತ್ 103 ಎಸೆತಗಳಲ್ಲಿ 6 ಬೌಂಡರಿ 2 ಸಿಕ್ಸರ್ ನೆರವಿನಿಂದ ಅಜೇಯ 65 ರನ್ ಗಳಿಸಿದರು.ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸ್ಪಟ್ಟ ಭಾರತಕ್ಕೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್.ರಾಹುಲ್ ಉತ್ತಮ ಆರಂಭವೊದಗಿಸಿದರು.
ಇವರಿಬ್ಬರು ಮೊದಲ ವಿಕೆಟ್ಗೆ 24.5 ಓವರ್ಗಳಲ್ಲಿ 91 ರನ್ಗಳ ಜೊತೆಯಾಟ ಕಟ್ಟಿದರು.ಈ ಜೊತೆಯಾಟವನ್ನು ಇಂಗ್ಲೆಂಡ್ ವೇಗಿ ಬ್ರೈಡನ್ ಕಾರ್ಸ್ ಬೇರ್ಪಡಿಸಿದರು. 42 ರನ್ (78 ಎಸೆತ, 8 ಬೌಂಡರಿ) ಗಳಿಸಿದ ರಾಹುಲ್ ಪೆವಿಲಿಯನ್ಗೆ ಮರಳಿದರು.ಪದಾರ್ಪಣೆ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆದ ಸಾಯಿ ಸುದರ್ಶನ್ ನಿರಾಸೆ ಮೂಡಿಸಿದರು. ಸಾಯಿ ವಿಕೆಟ್ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಪಾಲಾಯಿತು. ಜೈಸ್ವಾಲ್ ಮತ್ತು ಗಿಲ್ ಮೂರನೇ ವಿಕೆಟ್ಗೆ 130 ರನ್ ಜೊತೆಯಾಟ ಕಟ್ಟಿದರು. ಮುರಿಯದ 4ನೇ ವಿಕೆಟ್ಗೆ ಗಿಲ್ ಮತ್ತು ಪಂತ್ 138 ರನ್ ಜೊತೆಯಾಟ ಕಟ್ಟಿದರು.














