ಕಟಕ್: ನಾಯಕ ರೋಹಿತ್ ಶರ್ಮ ಆಕರ್ಷಕ ಶತಕದ ನೆರವಿನಿಂದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 4 ವಿಕೆಟ್ಗಳ ಜಯ ಸಾಧಿಸಿದೆ.ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಸರಣಿ ಕೈವಶ ಮಾಡಿಕೊಂಡಿತು. ಕಟಕ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. 49.5 ಓವರ್ಗಳಲ್ಲಿ ಇಂಗ್ಲೆಂಡ್ 304 ರನ್ಗಳಿಗೆ
ಆಲೌಟ್ ಆಗುವ ಮೂಲಕ ಭಾರತಕ್ಕೆ 305 ರನ್ಗಳ ಗೆಲುವಿನ ಗುರಿ ನೀಡಿತು.ಗೆಲುವಿನ ಗುರಿ ಬೆನ್ನತ್ತಿದ ಭಾರತ, 34 ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್ ನಷ್ಟಕ್ಕೆ 305 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಭಾರತದ ಪರ ರೋಹಿತ್ ಶರ್ಮಾ 90 ಎಸೆತಗಳಲ್ಲಿ 12 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ನೆರವಿನಿಂದ 119 ರನ್ ಚಚ್ಚಿದರು. ಶುಭ್ಮನ್ ಗಿಲ್ 52 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 60 ರನ್ ಗಳಿಸಿದರು. ರೋಹಿತ್ ಹಾಗೂ ಗಿಲ್ ಮೊದಲ ವಿಕೆಟ್ಗೆ 136 ರನ್ ಗಳಿಸಿ ಭದ್ರ ಅಡಿಪಾಯ ಹಾಕಿದರು. ಶ್ರೇಯಸ್ ಅಯ್ಯರ್ 44, ಅಕ್ಷರ್ ಪಟೇಲ್ ಅಜೇಯ 41 ರನ್ ಗಳಿಸಿ ಉಪಯುಕ್ತ ಕೊಡುಗೆ ನೀಡಿದರು. ಇಂಗ್ಲೆಂಡ್ನ ಒವರ್ಟನ್ 2 ವಿಕೆಟ್ ಪಡೆದರು.ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಡ್ 49.5 ಓವರ್ಗಳಲ್ಲಿ 304 ರನ್ಗಳಿಗೆ ಆಲೌಟ್ ಆಯಿತು.
ಫಿಲ್ ಸಾಲ್ಟ್ 29 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 26 ರನ್, ಬೆನ್ ಡಕೆಟ್ 56 ಎಸೆತಗಳಲ್ಲಿ ಹತ್ತು ಬೌಂಡರಿ ನೆರವಿನಿಂದ 65 ರನ್ ಬಾರಿಸಿದರು. ಹ್ಯಾರಿ ಬ್ರೂಕ್ 52 ಎಸೆತಗಳಲ್ಲಿ 31 ರನ್, ಜೋಸ್ ಬಟ್ಲರ್ 35 ಎಸೆತಗಳಲ್ಲಿ 34 ರನ್, ಜೋ ರೂಟ್ 72 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 69 ರನ್ , ಲಿಯಾಮ್ ಲಿವಿಂಗ್ಸ್ಟೋನ್ 32 ಎಸೆತಗಳಲ್ಲಿ 42 ರನ್ ಗಳಿಸಿ ರನ್ ಔಟಾದರು.
ಭಾರತದ ಬೌಲರ್ಗಳಾದ ರವೀಂದ್ರ ಜಡೇಜಾ 3 ವಿಕೆಟ್ ಪಡೆದರೆ, ಮುಹಮ್ಮದ್ ಶಮಿ, ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.