ಪಲೇಕೆಲೆ: ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಮತ್ತು ಉಪ ನಾಯಕ ಹಾರ್ದಿಕ್ ಪಾಂಡ್ಯ ಅವರ ಜವಾಬ್ದಾರಿಯುತ ಅರ್ಧ ಶತಕದ ನೆರವಿನಂದ ಭಾರತ ತಂಡ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ಥಾನಕ್ಕೆ 267 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ. ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಪಾಕ್ ವೇಗಿಗಳ ಶಿಸ್ತಿನ ದಾಳಿ ಎದುರು ಭಾರತಕ್ಕೆ
ಉತ್ತಮ ಆರಂಭ ಸಿಗಲಿಲ್ಲ. ಶುಭಮನ್ ಗಿಲ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಶರ್ಮಾ ಕೇವಲ 11 ರನ್ ಗಳಿಸಿ ಔಟಾದರು. ಬಳಿಕ ಬಂದ ಅನುಭವಿ ವಿರಾಟ್ ಕೊಹ್ಲಿ ಆಟ ಕೇವಲ 4 ರನ್ ಗಳಿಗೆ ಕೊನೆಗೊಂಡಿತು. ಗಿಲ್ (10) ಹಾಗೂ ಶ್ರೇಯಸ್ ಅಯ್ಯರ್ (14) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ ಟೀಂ ಇಂಡಿಯಾ 66 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ಗಳನ್ನು ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು.
ಈ ಹಂತದಲ್ಲಿ ಜೊತೆಯಾದ ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ಐದನೇ ವಿಕೆಟ್ ಪಾಲುದಾರಿಕೆಯಲ್ಲಿ 138 ರನ್ ಕಲೆಹಾಕಿದರು. ಮೊದಲಿಗೆ ರಕ್ಷಣಾತ್ಮಕ ಆಟವಾಡಿದ ಈ ಜೋಡಿ ನಿಧಾನವಾಗಿ ಬಿರುಸಿನ ಆಟಕ್ಕಿಳಿದರು.ಇಶಾನ್ 81 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 9 ಬೌಂಡರಿ ಸಹಿತ 82 ರನ್ ಗಳಿಸಿದರೆ, 90 ಎಸೆತಗಳನ್ನು ಎದುರಿಸಿದ ಹಾರ್ದಿಕ್ 1 ಸಿಕ್ಸರ್ ಮತ್ತು 7 ಬೌಂಡರಿಗಳಿದ್ದ 87 ರನ್ ಬಾರಿಸಿದರು. ಇವರಿಬ್ಬರ ವಿಕೆಟ್ ಪತನದ ಬಳಿಕ ರವೀಂದ್ರ ಜಡೇಜ 14 ರನ್ ಗಳಿಸಿದರು.ಕೊನೆಯಲ್ಲಿ ಜಸ್ಪ್ರೀತ್ ಬೂಮ್ರಾ (16) ಮೂರು ಬೌಂಡರಿ ಬಾರಿಸಿ ಗಮನ ಸೆಳೆದರು. ಅಂತಿಮವಾಗಿ ಭಾರತ 48.5 ಓವರ್ಗಳಲ್ಲಿ 266 ರನ್ ಗಳಿಸಿ ಆಲೌಟ್ ಆಯಿತು.
ಪಾಕ್ ಪರ ತ್ರಿವಳಿ ವೇಗಿಗಳಾದ ಶಾಹೀನ್ ಅಫ್ರಿದಿ (4), ಹ್ಯಾರಿಸ್ ರೌಫ್ (3) ಮತ್ತು ನಸೀಂ ಶಾ (3) ಎಲ್ಲ ವಿಕೆಟ್ ಪಡೆದರು.