ಬ್ರಿಜ್ಟೌನ್: ಭಾರತ ಐಸಿಸಿ ಟ್ವೆಂಟಿ-20 ವಿಶ್ವಕಪ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ರೋಚಕ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ಗಳ ಅಂತರದಲ್ಲಿ ಮಣಿಸಿ ರೋಹಿತ್ ಪಡೆ ಎರಡನೇ ಬಾರಿಗೆ ಟಿ20 ವಿಶ್ವ ಕಪ್ ಎತ್ತಿದೆ. 17 ವರ್ಷಗಳ ಬಳಿಕ ಮತ್ತೆ ಭಾರತ ಟಿ20 ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಟೂರ್ನಿಯಲ್ಲಿ ಭಾರತ ಅಜೇಯರಾಗಿ ಕಪ್ ಗೆದ್ದಿದೆ. ಮೊದಲು ಬ್ಯಾಟ್ ಮಾಡಿದ ಭಾರತ20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಭಾರೀ ಪೈಪೋಟಿ ನೀಡಿದ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಭಾರತದ ಬೌಲರ್ಗಳಾದ
ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಮಾರಕ ದಾಳಿಯಿಂದ ಸೋಲಿನ ದವಡೆಯಿಂದ ಭಾರತವನ್ನು ಪಾರು ಮಾಡಿ ಗೆಲುವಿನ ದಡ ಸೇರಿಸಿತು.
ಒಂದು ಹಂತದಲ್ಲಿ 4 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ ಗೆಲುವಿನೆಡೆಗೆ ಮುನ್ನುಗ್ಗಿದ್ದ ದಕ್ಷಿಣ ಆಫ್ರಿಕಾವನ್ನು ಮಾರಕ ಬೌಲಿಂಗ್ ಹಾಗೂ ಅದ್ಭುತ ಫೀಲ್ಡಿಂಗ್ ಮೂಲಕ ನಿಯಂತ್ರಿಸಿ ಭಾರತ ಪಂದ್ಯವನ್ನು ಗೆದ್ದುಕೊಂಡಿತು.ಕೊನೆಯ ಓವರ್ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು.ಹಾರ್ದಿಕ್ ಪಾಂಡ್ಯ 8 ರನ್ ನೀಡಿ ಎರಡು ವಿಕೆಟ್ ಪಡೆದು ಮಿಂಚಿದರು. ಕೊನೆಯ ಓವರ್ನಲ್ಲಿ ಎರಡು ಅದ್ಭುತ ಕ್ಯಾಚ್ ಹಿಡಿದ ಸೂರ್ಯಕುಮಾರ್ ಯಾದವ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. 27 ಎಸೆತಗಳಲ್ಲಿ 5 ಸಿಕ್ಸರ್ 2 ಬೌಂಡರಿ ಸಹೀತ 52 ರನ್ ಸಿಡಿಸಿದ ಹೆನ್ರಿಚ್ ಕ್ಲಾಸೆನ್ 31 ಎಸೆತಗಳಲ್ಲಿ 39 ರನ್ ಗಳಿಸಿದ ಕ್ವಿಂಟನ್ ಡಿಕಾಕ್, 21 ಎಸೆತಗಳಲ್ಲಿ 31 ರನ್ ಗಳಿಸಿದ ಸ್ಟಬ್ಸ್ ಹಾಗೂ 17 ಎಸೆತಗಳಲ್ಲಿ 21 ರನ್ ಬಾರಿಸಿದ ಡೇವಿಡ್ ಮಿಲ್ಲರ್ ಅದ್ಭುತ ಪ್ರದರ್ಶನ ನೀಡಿದರೂ ಕೊನೆಯ ಹಂತದಲ್ಲಿ ಮುಗ್ಗರಿಸಿದರು.
ಹಾರ್ದಿಕ್ ಪಾಂಡ್ಯ 3, ಜಸ್ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ತಲಾ ಎರಡು ವಿಕೆಟ್ ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಸಮಯೋಚಿತ ಅರ್ಧಶತಕದ (76) ನೆರವಿನಿಂದ ಭಾರತ ತಂಡವು ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.ಟಾಸ್ ಗೆದ್ದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಮೊದಲ ಓವರ್ನಲ್ಲಿ ಮೂರು ಬೌಂಡರಿ ಗಳಿಸಿದ ವಿರಾಟ್ ಕೊಹ್ಲಿ ಉತ್ತಮ
ಆರಂಭ ನೀಡಿದರು.ಆದರೆ ಎರಡನೇ ಓವರ್ನಲ್ಲಿ ನಾಯಕ ರೋಹಿತ್ ಶರ್ಮಾ (9) ಹಾಗೂ ರಿಷಬ್ ಪಂತ್ (0) ಅವರನ್ನು ಹೊರದಬ್ಬಿದ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಡಬಲ್ ಆಘಾತ ನೀಡಿದರು. ಸೂರ್ಯಕುಮಾರ್ ಯಾದವ್ (3) ಸಹ ವೈಫಲ್ಯ ಅನುಭವಿಸಿದರು. ಇದರಿಂದಾಗಿ 34 ರನ್ ಗಳಿಸುವಷ್ಟರಲ್ಲಿ ಭಾರತ ಮೂರು ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತು.ಈ ಹಂತದಲ್ಲಿ ಜೊತೆಗೂಡಿದ ಕೊಹ್ಲಿ ಹಾಗೂ ಅಕ್ಷರ್ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡಕ್ಕೆ ಆಸರೆಯಾದರು. ಕೊಹ್ಲಿ-ಅಕ್ಷರ್ ಜೋಡಿ ನಾಲ್ಕನೇ ವಿಕೆಟ್ಗೆ 72 ರನ್ ಪೇರಿಸಿದರು.31 ಎಸೆತಗಳಲ್ಲಿ 47 ರನ್ ಗಳಿಸಿದ ಅಕ್ಷರ್ ರನೌಟ್ ಆಗುವ ಮೂಲಕ ಪೆವಿಲಿಯನ್ಗೆ ಮರಳಿದರು. ಅಕ್ಷರ್ ನಾಲ್ಕು ಸಿಕ್ಸರ್ ಹಾಗೂ ಒಂದು ಬೌಂಡರಿ ಗಳಿಸಿದರು.
ಮತ್ತೊಂದೆಡೆ ದಕ್ಷಿಣ ಆಫ್ರಿಕಾದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ವಿರಾಟ್, ಟೂರ್ನಿಯಲ್ಲಿ ಮೊದಲ ಅರ್ಧಶತಕದ ಸಾಧನೆ ಮಾಡಿದರು. ಅಲ್ಲದೆ ಒಟ್ಟಾರೆಯಾಗಿ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 38ನೇ ಅರ್ಧಶತಕ ಗಳಿಸಿದರು.
ಅರ್ಧಶತಕದ ಬಳಿಕ ಬಿರುಸಿನ ಬ್ಯಾಟಿಂಗ್ ಮೂಲಕ ಕೊಹ್ಲಿ ಸ್ಕೋರ್ ಏರಿಸಿದರು. ಶಿವಂ ದುಬೆ ಅವರೊಂದಿಗೆ ಕೊಹ್ಲಿ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.ಕೊಹ್ಲಿ 59 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 76 ರನ್ ಗಳಿಸಿದರು. ಶಿವಂ ದುಬೆ 27 ರನ್ಗಳ (16 ಎಸೆತ, 3 ಬೌಂಡರಿ, 1 ಸಿಕ್ಸರ್) ಉಪಯುಕ್ತ ಕಾಣಿಕೆ ನೀಡಿದರು. ಹಾರ್ದಿಕ್ ಪಾಂಡ್ಯ 5* ಹಾಗೂ ರವೀಂದ್ರ ಜಡೇಜ 2 ರನ್ ಗಳಿಸಿದರು.ದಕ್ಷಿಣ ಆಫ್ರಿಕಾದ ಪರ ಕೇಶವ ಮಹಾರಾಜ್ ಹಾಗೂ ಹೆನ್ರಿ ನಾಕಿಯಾ ತಲಾ ಎರಡು ಮತ್ತು ರಬಾಡ ಹಾಗೂ ಜಾನ್ಸೆನ್ ತಲಾ ಒಂದು ವಿಕೆಟ್ ಗಳಿಸಿದರು. ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಜಸ್ಪ್ರೀತ್ ಬುಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.