ಮಂಗಳೂರು: ಕಳೆದ ರಾತ್ರಿಯಿಂದ ಸುರಿದ ಧಾರಾಕಾರ ಮಳೆಗೆ ಮಂಗಳೂರು, ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಂಗಳೂರು ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದು ತಗ್ಗು ಪ್ರದೇಶಗಳಲ್ಲಿ ಮನೆಗಳಿಗೂ ನಗರ ಮಧ್ಯದ ಕೆಲವು ಅಂಗಡಿಗಳಿಗೂ ನೀರು ನುಗ್ಗಿದೆ.ಕೆಲವು ಭಾಗಗಳಲ್ಲಿ ರಸ್ತೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿ ಹರಿದಿದೆ. ದ.ಕ.ಜಿಲ್ಲಾದ್ಯಂತ ಕಳೆದ
ರಾತ್ರಿಯಿಂದ ಭಾರೀ ಮಳೆಯಾಗಿದ್ದು, ಅಪಾರ ಹಾನಿಯಾಗಿದೆ. ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸತತ ಮಳೆಯಾಗಿದ್ದು, ಅಲ್ಲಲ್ಲಿ ಮನೆ, ಕಾಂಪೌಂಡ್ ಕುಸಿತಗೊಂಡಿವೆ. ಮರಗಳು ಉರುಳಿವೆ.ಉಳ್ಳಾಲ ತಾಲೂಕಿನಾದ್ಯಂತ ಹಲವು ಮನೆಗಳು ಜಲಾವೃತಗೊಂಡಿದೆ, ಪ್ರತ್ಯೇಕ ಘಟನೆಗಳಲ್ಲಿ ಮನೆಗಳ ಮೇಲೆ ಗುಡ್ಡ ಕುಸಿದು ಬಾಲಕಿ ಹಾಗೂ ಮಹಿಳೆ ಮೃತಪಟ್ಟಿದ್ದಾರೆ.ದೇರಳಕಟ್ಟೆ ಕಾನಕೆರೆಯಲ್ಲಿ ಮನೆಗೆ ಗುಡ್ಡ ಕುಸಿದು ವರ್ಷದ ಬಾಲಕಿ ಮೃತಪಟ್ಟಿದ್ದರೆ, ಮೋಂಟೆಪದವು ಬಳಿ ಗುಡ್ಡ ಕುಸಿದು ಸಿಲುಕಿದ್ದವರಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳು ಜಲಾವೃತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತ ಗೊಂಡಿದೆ.ಕುಂಪಲ, ಕಲ್ಲಾಪು, ಧರ್ಮ ನಗರ, ಉಚ್ಚಿಲ, ತಲಪಾಡಿ , ವಿದ್ಯಾನಗರ , ಕಲ್ಕಟ್ಟ ಮುಂತಾದ ಕಡೆ ಗಳಲ್ಲಿ ಹಲವು ಮನೆಗಳು ಜಲಾವೃತಗೊಂಡಿದ್ದು ಮನೆಯೊಳಗೆ ನೀರು ನುಗ್ಗಿದೆ. ಬಹಳಷ್ಟು ಕುಟುಂಬಗಳು ರಾತ್ರಿ ವೇಳೆ ಬೇರೆಡೆಗೆ ಸ್ಥಳಾಂತರ ಗೊಂಡಿದೆ.
ಕಲ್ಲಾಪುವಿನಲ್ಲಿ 50 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ .

ಕಾಸರಗೋಡುಜಿಲ್ಲೆಯಲ್ಲಿ ಗುರುವಾರ ಸಂಜೆಯಿಂದ ಎಡೆಬಿಡದೆ ಸುರಿದ ಗಾಳಿ ಮಳೆಗೆ ಜನಜೀವನ ಅಸ್ತ್ಯವ್ಯಸ್ತಗೊಂಡಿದೆ . ಮಂಜೇಶ್ವರದ ಬಹುತೇಕ ಕಡೆಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಮಂಜೇಶ್ವರ ಹೊಸಬೆಟ್ಟು , ವರ್ಕಾಡಿ ಗೇರುಕಟ್ಟೆ , ಪಾವೂರು , ಉದ್ಯಾವರ ಮಚ್ಛಂಪಾಡಿ, ಬಂಗ್ರಮಂಜೇಶ್ವರ ಕುಂಬಳೆ ಸಮೀಪದ ಮೊಗ್ರಾಲ್ ಎರಿಯಾಲ್ ಮೊದಲಾಡೆ ಪ್ರವಾಹ ಸ್ಥಿತಿ ಉಂಟಾಗಿದೆ. ಮಧೂರು ದೇವಸ್ಥಾನ ಜಲಾವೃತಗೊಂಡಿದೆ .ಮಲೆನಾಡ ಹೆದ್ದಾರಿಯ ಚೇವಾರ್ – ನಂದಾರಪದವು ರಸ್ತೆಯ ಹಲವೆಡೆ ಗುಡ್ದ ಕುಸಿತ ಹಾಗೂ ಮರಗಳು ಉರುಳಿ ಬಿದ್ದ ಪರಿಣಾಮ ಸಂಚಾರ ಸ್ಥಗಿತಗೊಂಡಿದೆ. ಬಂದ್ಯೋಡು – ಪೆರ್ಮುದೆ ರಸ್ತೆಯ ಕಯ್ಯಾರ್ ನಲ್ಲಿ ಗುಡ್ಡ ಕುಸಿತದ ಹಿನ್ನಲೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಚೆರ್ಕಳ – ಚಟ್ಟಂಚಾಲ್ ರಸ್ತೆಯ ಹಲವೆಡೆಗಳಲ್ಲಿ ರಸ್ತೆ ಕೊಚ್ಚಿ ಹೋಗಿದೆ. ಭೂಕುಸಿತ ಉಂಟಾಗಿದೆ.
ಮಂಜೇಶ್ವರ ಮಜಿಬೈಲ್ ಬಟ್ಟತ್ತೂರು ಎಂಬಲ್ಲಿ ನಿಲ್ಲಿಸಿದ್ದ ಕಾರು ಹಾಗೂ ಬೈಕ್ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದೆ. ಮಂಜೇಶ್ವರ ಹೊಸಬೆಟ್ಟು ವಿನಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿದೆ. ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕಾಸರಗೋಡು – ಚಂದ್ರಗಿರಿ ರಸ್ತೆಯ ಲ್ಲಿ ಭೂಕುಸಿತ ಉಂಟಾಗಿದೆ ಎಂದು ವರದಿಯಾಗಿದೆ.