ಬೆಂಗಳೂರು:ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ (80) ಅವರು ಶುಕ್ರವಾರ ನಿಧನರಾಗಿದ್ದಾರೆ.ಅವರು ಕೆಲದಿನಗಳಿಂದ ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಬೆಳಿಗ್ಗೆ 7 ಗಂಟೆಗೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರಿಗೆ ನಾಲ್ವರು ಪುತ್ರರಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಜನಿಸಿದ ಎಚ್.ಎಸ್. ವೆಂಕಟೇಶಮೂರ್ತಿ ಅವರು, 1973ರಲ್ಲಿ ಬೆಂಗಳೂರಿನ
ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡರು. ಮೂರು ದಶಕಗಳ ಕಾಲ ಅಲ್ಲಿ ಕಾರ್ಯನಿರ್ವಹಿಸಿದ ಅವರು, ಇದೇ ಕಾಲೇಜಿನಲ್ಲಿ 2000ನೇ ಇಸವಿಯಲ್ಲಿ ನಿವೃತ್ತರಾಗಿದ್ದರು.
ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಸೇರಿ ಮೊದಲಾದ ಪ್ರಕಾರಗಳಲ್ಲಿ ಅವರು ಸಾಹಿತ್ಯ ಕೃತಿಗಳನ್ನು ಸೃಷ್ಟಿಸಿದ್ದಾರೆ.ಕ್ರಿಯಾಪರ್ವ, ಒಣಮರದ ಗಿಳಿಗಳು, ಎಷ್ಟೊಂದು ಮುಗಿಲು, ಅಮೆರಿಕಾದಲ್ಲಿ ಬಿಲ್ಲುಹಬ್ಬ, ನದಿತೀರದಲ್ಲಿ, ಉತ್ತರಾಯಣ ಮತ್ತು ಕನ್ನಡಿಯ ಸೂರ್ಯ, ವೈದೇಹಿ ಮತ್ತು ಇತರ ಕವನಗಳು ಮೊದಲಾದುವು ಇವರ ಮುಖ್ಯ ಕಾವ್ಯಕೃತಿಗಳು. ಅಗ್ನಿವರ್ಣ, ಚಿತ್ರಪಟ, ಉರಿಯ ಉಯ್ಯಾಲೆ, ಮಂಥರೆ ಸೇರಿ ವಿವಿಧ ನಾಟಕಗಳು, ತಾಪಿ, ಅಮಾನುಷರು, ಕದಿರನಕೋಟೆ, ಅಗ್ನಿಮುಖಿ, ವೇದವತಿ ನದಿಯಲ್ಲ ಕಾದಂಬರಿಗಳನ್ನು ರಚಿಸಿದ್ದಾರೆ.ವಿವಿಧ ಪ್ರಶಸ್ತಿ ಪುರಸ್ಕೃತರಾದ ಅವರು, ಕಲಬುರಗಿಯಲ್ಲಿ ನಡೆದ 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.