ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಗಾಯಗೊಂಡಿರುವ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಟೂರ್ನಿಯಿಂದಲೇ ನಿರ್ಗಮಿಸಿದ್ದಾರೆ.ಹಾರ್ದಿಕ್ ಪಾಂಡ್ಯ ಅಲಭ್ಯರಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಕರ್ನಾಟಕದ ವೇಗದ ಬೌಲರ್
ಪ್ರಸಿದ್ಧ ಕೃಷ್ಣ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಉಪನಾಯಕ ಸ್ಥಾನಕ್ಕೆ ಕರ್ನಾಟಕದ ಕೆ.ಎಲ್. ರಾಹುಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಬೌಲಿಂಗ್ ವೇಳೆ ಚೆಂಡನ್ನು ತಡೆಯಲು ಯತ್ನಿಸಿದ ಸಂದರ್ಭದಲ್ಲಿ ಹಾರ್ದಿಕ್ ಕಾಲಿಗೆ ಗಾಯವಾಗಿತ್ತು.ವಿಶ್ವಕಪ್ನಲ್ಲಿ ಉಳಿದಿರುವ ಪಂದ್ಯಗಳಲ್ಲಿ ಹೊರಗುಳಿಯುವುದನ್ನು ಅರಗಿಸಿಕೊಳ್ಳುವುದು ಕಷ್ಟಕರ ಎಂದು ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯಿಸಿದ್ದಾರೆ.ಈ ತಂಡವು ನನ್ನ ಪಾಲಿಗೆ ವಿಶೇಷವಾಗಿದ್ದು, ವಿಶ್ವಕಪ್ ಗೆಲ್ಲುವ ನಂಬಿಕೆಯಿದೆ. ನಾನು ತಂಡದ ಜತೆಗಿದ್ದು, ಪ್ರತಿಯೊಂದು ಪಂದ್ಯದಲ್ಲೂ ಹುರಿದುಂಬಿಸಲಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು ಎಂದು ಅವರು ಎಕ್ಸ್ನಲ್ಲಿ ಹೇಳಿದ್ದಾರೆ.












