ಸುಳ್ಯ:ಅರ್ಹರಾದ ಪ್ರತಿಯೊಬ್ಬ ಫಲಾನುಭವಿಗೂ ಸರಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ತಲುಪಿಸುವುದು ಗ್ಯಾರಂಟಿ ಅನುಷ್ಠಾನ ಸಮಿತಿಯ ಗುರಿ. ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಗ್ಯಾರಂಟಿ ಯೋಜನೆಯ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದ್ದಾರೆ. ಸುಳ್ಯ ತಾಲೂಕು ಪಂಚಾಯತ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜನರಿಗೆ ಅನುಕೂಲ
ಆಗಲೆಂದು ತಾಲೂಕು ಪಂಚಾಯತ್ನಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಕಚೇರಿ ತೆರೆಯಲಾಗಿದೆ. ತಾಲೂಕು ಮಟ್ಟದ ಸಭೆ ನಡೆಸಿ ತಾಲೂಕಿನಲ್ಲಿ ಯೋಜನೆಯ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಯೋಜನೆ ತಲುಪಿಸಲು ಪ್ರಯತ್ನ ನಡೆಸಲಾಗುವುದು. ವಂಚಿತರಾದ ಫಲಾನುಭವಿಗಳ ತಾಂತ್ರಿಕ ಸಮಸ್ಯೆಗಳ ಕುರಿತು ಪಟ್ಟಿ ಮಾಡಿ ನೀಡಲು ಸೂಚಿಸಲಾಗಿದೆ. ಯೋಜನೆಗೆ ಅರ್ಜಿ ಸಲ್ಲಿಸಿ ವಂಚಿತರಾಗಿರುವ ಫಲಾನುಭವಿಗಳ ಸರ್ವೆ ನಡೆಸಿ ಸರಕಾರಕ್ಕೆ ವರದಿ ನೀಡಿ ಅರ್ಹರಿಗೆ ಯೋಜನೆ ತಲುಪುವಂತೆ ಸಮಿತಿ ಮಾಡಲಿದೆ. ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸಲಾಗುವುದು.
ಕೆಲವೊಂದು ಸಮಸ್ಯೆಗಳ ಕುರಿತು ರಾಜ್ಯ ಸಮಿತಿ ಹಾಗೂ ಸರಕಾರದ ಮಟ್ಟದಲ್ಲಿ ಪರಿಹರಿಸಲಾಗುವುದು ಎಂದು ಅವರು ತಿಳಿಸಿದರು.
ಶಕ್ತಿ ಯೋಜನೆಯಲ್ಲಿ ಸುಳ್ಯ ತಾಲೂಕಿನಲ್ಲಿ 58,89,053 ಮಂದಿ ಪ್ರಯೋಜನ ಪಡೆದಿದ್ದಾರೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಆಗಸ್ಟ್ ತಿಂಗಳಲ್ಲಿ 48.59 ಕೋಟಿ ರೂ ಬಂದಿದೆ. ಒಟ್ಟು 27, 738 ಮಂದಿ ಅರ್ಜಿ ಸಲ್ಲಿಸಿದ್ದು, 25, 257 ಮಂದಿ ಅರ್ಹರಿದ್ದಾರೆ. ಶೇ. 91 ಸಾಧನೆಯಾಗಿದೆ. ಐ.ಟಿ. ಪಾವತಿದಾರರೆಂದು 332, ಜಿಎಸ್ಟಿ ಪಾವತಿದಾರರು 223ರಿಗೆ ಯೋಜನೆ ಸಿಗುತ್ತಿಲ್ಲ ಆ ಕುರಿತು ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದವರು ವಿವರ ನೀಡಿದರು.
ಗೃಹಜ್ಯೋತಿ ಯೋಜನೆಯಲ್ಲಿ ಸುಳ್ಯ ಉಪ ವಿಭಾಗದಲ್ಲಿ 27,105 ಮಂದಿಯಲ್ಲಿ 26,806 ಮಂದಿ ಫಲಾನುಭವಿಗಳಿದ್ದಾರೆ. ಶೇ.98.49 ಸಾಧನೆ ಆಗಿದೆ. ಸುಬ್ರಹ್ಮಣ್ಯ ಉಪವಿಭಾಗದಲ್ಲಿ 9601 ಮಂದಿಯಲ್ಲಿ 9296 ಮಂದಿ ಸೌಲಭ್ಯ ಸಿಗುತ್ತಿದೆ. ಶೇ.96.82 ಸಾಧನೆಯಾಗಿದೆ ಎಂದವರು ಹೇಳಿದರು.
ಯುವನಿಧಿಯಲ್ಲಿ ತಾಲೂಕಿನಲ್ಲಿ 225 ಮಂದಿ ಯೋಜನೆ ಸೌಲಭ್ಯ ಸಿಗುತ್ತಿದೆ. ಅಪ್ಲೈ ಮಾಡಿದವರಲ್ಲಿ 53 ಮಂದಿ ಬಾಕಿ ಇದ್ದಾರೆ. ಕೆಲವು ತಾಂತ್ರಿಕ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ಅಧಿಕಾರಿಗಳಲ್ಲಿ ಚರ್ಚಿಸಲಾಗಿದೆ.ಯುವ ನಿಧಿ ನೋಂದಣಿ ಮತ್ತು ವೆರಿಫಿಕೇಷನ್ ತಾಲೂಕು ಮಟ್ಟದಲ್ಲಿಯೇ ಮಾಡುವ ವ್ಯವಸ್ಥೆ ಮಾಡಲಾಗುವುದು.
ಎಂದರು. ಅನ್ನಭಾಗ್ಯದಲ್ಲಿ 18119 ಮಂದಿಯಲ್ಲಿ 17363 ಮಂದಿಯ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂದು ಹೇಳಿದರು. ಯಾವ ಗ್ರಾಮದಲ್ಲಿ ಅರ್ಹತೆ ಇದ್ದು ಯೋಜನೆ ಸಿಗದವರು ಇದ್ದಾರೋ ಅಂತವರ ಸರ್ವೆಯನ್ನು ಸಮಿತಿಯವರು ಹಾಗೂ ಅಧಿಕಾರಿಗಳು ಮಾಡಲಿದ್ದಾರೆ. ಅವರಿಗೆ ಯೋಜನೆ ದೊರೆಯುವಂತೆ ಮಾಡಲಾಗುವುದು.
ಪಡಿತರ ತಿದ್ದುಪಡಿಯಾಗದೇ ಯೋಜನೆ ಸಿಗದಿರುವ ಕುರಿತು ನಮ್ಮ ಗಮನದಲ್ಲಿದೆ.ಆ ನಿಟ್ಟಿನಲ್ಲಿಯೂ ಚರ್ಚಿಸಲಾಗಿದೆ. ಗ್ಯಾರಂಟಿ ಅನುಷ್ಠಾನ ಕುರಿತು ಏನೇ ಸಮಸ್ಯೆಗಳಿದ್ದರೂ ಜನರು ಸುಳ್ಯ ಕಚೇರಿಯನ್ನು ಸಂಪರ್ಕಿಸಬಹುದು. ಇಲ್ಲವಾದರೆ ಗ್ಯಾರಂಟಿ ಅನುಷ್ಠಾನ ಸಮಿತಿಯವರನ್ನೂ ಸಂಪರ್ಕಿಸಬಹುದು ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಕಾಂಗ್ರೆಸ್ ಸರಕಾರ ಇರುವ ತನಕ ಯೋಜನೆ ಮುಂದುವರಿಯಲಿದೆ. ಈ ಕುರಿತ ಅಪಪ್ರಚಾರಕ್ಕೆ ಜನತೆ ಕಿವಿಗೊಡಬಾರದು ಎಂದು ಹೇಳಿದರು. 3.78 ಲಕ್ಷ ಕೋಟಿಯ ರಾಜ್ಯ ಬಜೆಟ್ನಲ್ಲಿ 56 ಸಾವಿರ ಕೋಟಿ ಮಾತ್ರ ಗ್ಯಾರಂಟಿ ಯೋಜನೆಗೆ ಸಾಕು. ಆದುದರಿಂದ ಅಭಿವೃದ್ಧಿ ಅನುದಾನಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಜಿಲ್ಲಾ ಉಪಾಧ್ಯಕ್ಷ ಜೋಕಿಂ ಡಿಸೋಜ, ಜಿಲ್ಲಾ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ನ.ಪಂ. ಸದಸ್ಯ ಶರೀಫ್ ಕಂಠಿ, ರಾಧಾಕೃಷ್ಣ ಬೊಳ್ಳೂರು, ಇಕ್ಬಾಲ್ ಎಲಿಮಲೆ, ರಾಜೀವಿ ಆರ್ ರೈ, ಶಾಫಿ ಕುತ್ತಮೊಟ್ಟೆ, ಪಕ್ಷದ ನಾಯಕರು, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಉಪದ್ದರು.