ಸುಳ್ಯ:ಸುಳ್ಯ ತಾಲೂಕು ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟದ ವತಿಯಿಂದ ಪಂಚಾಯತ್ ರಾಜ್ ಸಮಾವೇಶ ಡಿ.4ರಂದು ಪೂ.10.30ಕ್ಕೆ ಸುಳ್ಯ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ ಎಂದು ಸುಳ್ಯ ತಾಲೂಕು ಗ್ರಾಮಪಂಚಾಯತ್ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚಿನ ವರ್ಷಗಳಲ್ಲಿ
ಸ್ಥಳೀಯ ಸರಕಾರಗಳು ಅಂದರೆ ಗ್ರಾಮ ಪಂಚಾಯಿತಿಗಳು ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳಿಗೆ ಮತ್ತು ಅನುದಾನದ ಕೊರತೆಗಳಿಗಾಗಿ ಪಂಚಾಯಿತಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಂದ ಆಯ್ಕೆಯಾದ ಅವಿಭಜಿತ ದ. ಕ. ಜಿಲ್ಲೆಯ ಎರಡು ಜನ ವಿಧಾನ ಪರಿಷತ್ತಿನ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಹಾಗೂ ಮಂಜುನಾಥ ಭಂಡಾರಿ ಮತ್ತು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರೊಂದಿಗೆ ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯಿತಿಗಳ ಸದಸ್ಯರೊಳಗೂಡಿ ಮುಖಾಮುಖಿ ಚರ್ಚೆ ನಡೆಸಲಾಗುವುದು. ಇವರೊಂದಿಗೆ ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜೊತೆಗೂಡಿ ಗ್ರಾಮಪಂಚಾಯಿತಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಜನಪ್ರತಿನಿಧಿಗಳೊಂದಿಗೆ ಮಂಡಿಸಿ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾವಿಸಿ ಬಗೆಹರಿಸುವ ನಿಟ್ಟಿನಲ್ಲಿ ಹಕ್ಕೊತ್ತಾಯ ಮಂಡಿಸಲು ನಿರ್ಧರಿಸಲಾಗಿದೆ.
ಗ್ರಾಮಪಂಚಾಯಿತಿಗಳಲ್ಲಿ, ಜಲಜೀವನ್ ಮಿಷನ್ ಕಾಮಗಾರಿಗಳ ಬಗ್ಗೆ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಲೋಪದೋಷಗಳು, ಸಾಮಾಜಿಕ ಪರಿಶೋದನೆಯ ಬಗ್ಗೆ ಮತ್ತು ಪಂಚಾಯತ್ಗಳಲ್ಲಿ ಕೇರಳ ಮಾದರಿಯ ಯೋಜನೆ ರೂಪಿಸಲು ಕ್ರಮ, ಸಿಬ್ಬಂದಿ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬ, ತಾಲೂಕಿನ ಅರ್ಧಕ್ಕಿಂತ ಹೆಚ್ಚಿನ ಗ್ರಾಮಪಂಚಾಯಿತಿಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇಲ್ಲದಿರುವುದು ಮತ್ತು ತಾಲೂಕು ಪಂಚಾಯತ್ ಸಿಬ್ಬಂದಿಗಳ ಕೊರತೆ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ ಸಹಾಯಕ ಅಭಿಯಂತರರ ಕೊರತೆ, ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ, ಕುಡಿಯುವ ನೀರಿನ ವಿದ್ಯುತ್ ಬಿಲ್ಲುಗಳಿಗೆ ವಿನಾಯಿತಿ ಮತ್ತು ಗ್ರಾಮಪಂಚಾಯತ್ ಸದಸ್ಯರುಗಳು ಎದುರಿಸುತ್ತಿರುವ ಸಮಸ್ಯೆಗಳು ಸೇರಿ ಹಲವು ಸಮಸ್ಯೆಗಳನ್ನು ತಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳ ಮುಂದೆ ಮಂಡಿಸಲು ತೀರ್ಮಾನಿಸಲಾಗಿದೆ. ಮತ್ತು ಈ ಸಭೆಗೆ ಎಲ್ಲಾ ಗ್ರಾಮಪಂಚಾಯತ್ ಸದಸ್ಯರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಬೇಕಾಗಿ ವಿನಂತಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಸುಳ್ಯ ತಾಲೂಕು ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟದ
ಪ್ರಧಾನ ಕಾರ್ಯದರ್ಶಿ ಕೇಶವ ಅಡ್ತಲೆ, ಸಂಚಾಲಕರಾದ ಮಹೇಶ್ ಕುಮಾರ್ ಕರಿಕ್ಕಳ, ಜಿಲ್ಲಾ ಸಮಿತಿ ಸದಸ್ಯ ಹರೀಶ್ ರೈ ಉಬರಡ್ಕ, ರವೀಂದ್ರ ರೈ, ಗೀತಾ ಹೊಸೊಳಿಕೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.