ಬೆಳ್ಳಾರೆ:ಬೆಳ್ಳಾರೆಯ ಗೌರೀಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಗಳು ಕ್ಷೇತ್ರದ ತಂತ್ರಿಗಳಾದ ಕುನ್ನತ್ತಿಲ್ ಬ್ರಹ್ಮಶ್ರೀ ತಂತ್ರಿ ಮುರಳಿಕೃಷ್ಣ ನಂಬೂದಿರಿಯವರ ನೇತೃತ್ವದಲ್ಲಿ ಅ.10ರಿಂದ ಅ. 20ರ ತನಕ ನಡೆಯಲಿದೆ. ಪ್ರತಿ ದಿನ ಸಂಜೆ 6ಗಂಟೆಯಿಂದ ಭಜನೆ, ಧಾರ್ಮಿಕ, ಸಾಂಸ್ಕೃತಿಕ ಮತ್ತು
ಸಭಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು:
ಅ. 12ರಂದು ಆಡಳಿತ ಮಂಡಳಿ ಅಧ್ಯಕ್ಷರಾದ ಚಂದ್ರಹಾಸ ಮಣಿಯಾಣಿಯವರ ಅಧ್ಯಕ್ಷತೆಯಲ್ಲಿ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳಿಂದ ಆಶೀರ್ವಚನ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕುಂಬಳೆ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಕೆ. ಶೆಟ್ಟಿ, ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶ ಸಮಿತಿ ಉಪಾಧ್ಯಕ್ಷ ಮಂಜುನಾಥ ಆಳ್ವ ಮಡ್ವ ಭಾಗವಹಿಸಲಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪೊಸವಳಿಗೆ ಪಂಜಿಗಾರು ವೇದಿಕೆಯಲ್ಲಿ ಗೌರವ ಉಪಸ್ಥಿತಿಯಲ್ಲಿರಲಿದ್ದಾರೆ.
ಅ. 15ರಂದು ಬೆಳಿಗ್ಗೆ 7ರಿಂದ ಗಣಪತಿ ಹೋಮ, ವಾಹನ ಪೂಜೆ, ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ, ಸಂಜೆ 5.30ರಿಂದ ಕ್ಷೇತ್ರದ ತಂತ್ರಿಗಳ ಮುಂದಾಳತ್ವದಲ್ಲಿ ಶ್ರೀಚಕ್ರ ದುರ್ಗಾಪೂಜೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಅ. 10ರಂದು ಅಭಿನವ ಕೇಸರಿ ಯಕ್ಷ ಕಲಾ ತಂಡ ಮಾಡಾವು ಇವರಿಂದ ಯಕ್ಷಗಾನ ಹರಿದರ್ಶನ, ಅ. 11ರಂದು ಕಲಾಮಂದಿರ್ ಮತ್ತು ಸ್ನೇಹಾಂಜಲಿ ಕುಣಿತ ಭಜನಾ ತಂಡ ಬೆಳ್ಳಾರೆ ಇವರಿಂದ ನೃತ್ಯ ವೈಭವ, ಅ. 12ರಂದು ವೈಷ್ಣವಿ ನಾಟ್ಯಾಲಯ ತಂಡದಿಂದ ನೃತ್ಯಾರ್ಪಣಂ, ಅ. 13ರಂದು ಪೆರ್ಲಂಪಾಡಿ ನಾಟ್ಯರಂಗ ತಂಡದಿಂದ ಯಕ್ಷಗಾನ ಕೃಷ್ಣಲೀಲೆ ಕಂಸವಧೆ, ಅ. 14ರಂದು ಶ್ರೀ ಮಹಾವಿಷ್ಣು ಸಿಂಗಾರಿಮೇಳ ಬಾಳಿಲ ಮುಪ್ಪೇರ್ಯ ಇವರಿಂದ ಯಕ್ಷಗಾನ ತಾರಾಕ್ಷಿ ಮದನಾವಳಿ-ವೀರಮಣಿ ಕಾಳಗ, ಅ. 15ರಂದು ಯಜ್ಞೇಶ್ ಆಚಾರ್ ಕುಕ್ಕೆಶ್ರೀ ಸುಬ್ರಹ್ಮಣ್ಯ ಬಳಗದಿಂದ ಭಕ್ತಿ ಸಂಗೀತ, ಅ. 16ರಂದು ತಿಂಗಳಾಡಿ ನಾಟ್ಯಾಭಿಯೋಗಿ ನೃತ್ಯಶಾಲಾ ತಂಡದಿಂದ ನೃತ್ಯಾರ್ಪಣಂ, ಅ. 17ರಂದು ಸ್ಥಳೀಯರಿಂದ ಕಾರ್ಯಕ್ರಮ ವೈವಿಧ್ಯ, ಅ. 18ರಂದು ಪುತ್ತೂರಿನ ವರ್ಣಕಟೀರ ಕಲ್ಲಾರೆಯವರಿಂದ ಭಕ್ತಿ ರಸಮಂಜರಿ, ಅ. 19ರಂದು ಅಂಕತ್ತಡ್ಕ ಸುಮಚರಣಂ ನಾಟ್ಯಾಲಯ ತಂಡದಿಂದ ಭರತನಾಟ್ಯ ಮತ್ತು ಅ. 20ರಂದು ವಿಧುಷಿ ಶ್ರೀಲತಾ ನಿಕ್ಷಿತ್ ತಂಡದಿಂದ ವೀಣಾಮೃದಂಗ ಯುಗಳವಾದನ ನಡೆಯಲಿದೆ. ಪ್ರತೀದಿನ ರಾತ್ರಿ ಭಜನಾ ಕಾರ್ಯಕ್ರಮದ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.








