ಗುವಾಹಟಿ:ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ದ್ವಿಶತಕ ಸಿಡಿಸಿ ವಿಶ್ವ ದಾಖಲೆ ಬರೆದಿದ್ದಾರೆ. ನಾಯಕನ ಆಟದ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 8 ವಿಕೆಟ್ ಗೆಲುವು ದಾಖಲಿಸಿದ ಭಾರತ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿತು.ಏಕದಿನ ಕ್ರಿಕೆಟ್ ಇತಿಹಾಸದಲ್ಲಿ
ಅತೀ ಹೆಚ್ಚು ರನ್ ಬೆನ್ನಟ್ಟಿ ಗೆದ್ದ ಎರಡನೇ ತಂಡ ಎಂಬ ದಾಖಲೆಯನ್ನು ಭಾರತ ನಿರ್ಮಿಸಿದೆ.ಇದು ಏಕದಿನದಲ್ಲಿ ಟೀಂ ಇಂಡಿಯಾದ ಅತೀ ದೊಡ್ಡ ಚೇಸಿಂಗ್ ಗೆಲುವಾಗಿದೆ. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿತು.ಬೃಹತ್ ಗುರಿ ಬೆನ್ನಟ್ಟಿದ ಭಾರತ 43.3 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 406 ರನ್ ಗಳಿಸಿ ಗೆದ್ದು ಸಂಭ್ರಮಿಸಿತು. ಗುವಾಹಟಿಯ ಬರ್ಸಾಪಾರ ಕ್ರೀಡಾಂಗಣದಲ್ಲಿ ನಡೆದ
ಪಂದ್ಯದಲ್ಲಿ 62 ಎಸೆತಗಳಲ್ಲಿ ಶತಕ ಸಿಡಿಸಿದ ಗಿಲ್ ಕೇವಲ 117 ಎಸೆತಗಳಲ್ಲಿ ಗಿಲ್ ದ್ವಿಶತಕದ ಐತಿಹಾಸಿಕ ಸಾಧನೆ ಮಾಡಿದರು.133 ಎಸೆತಗಳಲ್ಲಿ 26 ಬೌಂಡರಿ ಹಾಗು 8 ಸಿಕ್ಸರ್ ನೆರವಿನಿಂದ ಗಿಲ್ ಅಜೇಯ 223 ರನ್ ಗಳಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಎರಡು ದ್ವಿಶತಕ ಬಾರಿಸಿದ ರೋಹಿತ್ ಶರ್ಮಾ ನಂತರದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏಕದಿನ ಪಂದ್ಯದ ರನ್ ಚೇಸಿಂಗ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ (201 ರನ್) ಅವರ ಗರಿಷ್ಠ ಸ್ಕೋರ್ ದಾಖಲೆಯನ್ನೂ ಗಿಲ್ ಧೂಳೀಪಟ ಮಾಡಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಕೇವಲ 23 ವರ್ಷದವರಾಗಿದ್ದಾಗ 149 ಎಸೆತಗಳಲ್ಲಿ 208 ರನ್ ಚಚ್ಚಿದ್ದರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು. ವಿಂಡೀಸ್ ವಿರುದ್ಧ ತಿರುವನಂತಪುರಂನಲ್ಲಿ ನಡೆದ ಮೊದಲ ಏಕದಿನದಲ್ಲಿಯೂ ಗಿಲ್ ಶತಕ ಬಾರಿಸಿದ್ದರು. ಆರಂಭಿಕ ಬ್ಯಾಟರ್
ರೋಹಿತ್ ಶರ್ಮ ಭರ್ಜರಿ ಶತಕ ಸಿಡಿಸಿ ಗೆಲುವಿಗೆ ಅಡಿಪಾಯ ಹಾಕಿದರು. ರೋಹಿತ್ 75 ಎಸೆತಗಳಲ್ಲಿ 10 ಬೌಂಡರಿ ಹಾಗು 6 ಸಿಕ್ಸರ್ ನೆರವಿನಿಂದ 101ರನ್ ಬಾರಿಸಿದರು. ಗಿಲ್ ಹಾಗು ರೋಹಿತ್ ಮೊದಲ ವಿಕೆಟ್ಗೆ 26.2 ಓವರ್ಗಳಲ್ಲಿ 255 ರನ್ ಬಾರಿಸಿದರು. ವಿರಾಟ್ ಕೊಹ್ಲಿ 29 ರನ್ ಗಳಿಸಿದರೆ, ಋತುರಾಜ್ ಗಾಯಕ್ವಾಡ್ ಅಜೇಯ 31ರನ್ ಗಳಿಸಿದರು. ಮೊದಲು ಬ್ಯಾಟಿಂಗ್ ಮಾಡಿದ
ವಿಂಡೀಸ್ ಪಡೆ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿತು. ವಿಂಡೀಸ್ ಪರ ಜಾನ್ ಕ್ಯಾಂಪ್ಬೆಲ್ (101), ಶಾಯ್ ಹೋಪ್ (104), ಅಮೀರ್ ಜಾಂಗೂ (114) ಶತಕ ಸಿಡಿಸಿ ಸಂಭ್ರಮಿಸಿದರು. ಭಾರತ ಪರ ಗುರ್ನೂರ್ ಬ್ರಾರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್ ತಲಾ ಎರಡು, ಪ್ರಸಿದ್ಧ ಕೃಷ್ಣ ಒಂದು ವಿಕೆಟ್ ಕಬಳಿಸಿದರು.ಆರಂಭಿಕ ಜಾನ್ ಕ್ಯಾಂಪ್ಬೆಲ್ ಸ್ಫೋಟಕ ಇನ್ನಿಂಗ್ಸ್ ನೀಡುವ ಮೂಲಕ ಅತ್ಯಂತ ವೇಗದ ಏಕದಿನ ಶತಕ ಸಿಡಿಸಿದರು. ಕೇವಲ 65 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್ಗಳ ನೆರವಿನಿಂದ 101 ರನ್ ಬಾರಿಸಿದರು. ಜಾನ್ಗೆ ಸಾಥ್ ನೀಡಿದ ಶಾಯ್ ಹೋಪ್ (104 ರನ್, 94 ಎಸೆತ) ಮತ್ತು ಅಮಿರ್ ಜಾಂಗೋ (114 ರನ್, 77 ಎಸೆತ) ಇಬ್ಬರೂ ಸಹ ಶತಕ ಬಾರಿಸಿದರು. 811 ರನ್ ದಾಖಲಾದ ಪಂದ್ಯದಲ್ಲಿ ಒಂದು ದ್ವಿಶತಕ ಮತ್ತು 4 ಶತಕ ದಾಖಲಾಯಿತು.









