ಸುಳ್ಯ:ನಾಡಿನಲ್ಲಿ ಎಲ್ಲೆಡೆ ಚೌತಿ, ಸಾರ್ವಜನಿಕ ಗಣೇಶೋತ್ಸವ ಸಂಭ್ರಮ. ಮಳೆಗಾಲ ಮುಗಿಯುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಬರುತ್ತದೆ. ಬದುಕಿನ ಸಂಭ್ರಮದ ಕ್ಷಣಗಳು ಹೆಚ್ಚುತ್ತವೆ. ಅದರಲ್ಲಿಯೂ ನಾಡಿಗೆ ನಾಡೇ ಸಂಭ್ರಮಿಸುವ ಗಣೇಶ ಹಬ್ಬ, ಸಾರ್ವಜನಿಕ ಗಣೇಶೋತ್ಸವದ ಆಚರಣೆಗೆ ನಾಡು ಅಣಿಯಾಗಿದೆ. ಸೆ.7 ರಂದು ಚೌತಿ ಹಬ್ಬ. ಮುಂದಿನ ಒಂದು
ವಾರಗಳ ಕಾಲ ಎಲ್ಲೆಡೆ ಗಣೇಶ ಹಬ್ಬ. ಹಬ್ಬಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರತಿಷ್ಠೆ ಮಾಡುವ ಗಣಪತಿ ಮೂರ್ತಿಗಳು ಸಿದ್ಧಗೊಂಡಿದೆ. ಎಲ್ಲೆಡೆ ಕಲಾವಿದರ ಕೈಚಳಕದಲ್ಲಿ ವಿಘ್ನ ವಿನಾಶಕನ ಸುಂದರ ಮೂರ್ತಿಗಳು ಅರಳಿ ನಿಂತಿದೆ. ಇಂದು ಸಂಜೆಯ ವೇಳೆಗೆ ಗಣೇಶನ ಮೂರ್ತಿಗಳನ್ನು ಗಣೇಶೋತ್ಸವದ ವೇದಿಕೆಯತ್ತ ಕೊಂಡೊಯ್ಯುತ್ತಾರೆ. ನಾಳೆ ಬೆಳಿಗ್ಗೆ ಎಲ್ಲೆಡೆ ಪ್ರತಿಷ್ಠೆ ನಡೆಯುತ್ತದೆ.ಗಣೇಶೋತ್ಸವದ ಕಳೆ ಹೆಚ್ಚುವುದು ಅಲ್ಲಿ ಪೂಜಿಸುವ
ಗಣೇಶ ವಿಗ್ರಹದ ಚೈತನ್ಯದಿಂದ. ಪ್ರತಿ ವರ್ಷವೂ ಸುಂದರವಾದ ಮತ್ತು ಆಕರ್ಷಕ ಗಣಪತಿ ವಿಗ್ರಹಗಳನ್ನು ತಯಾರಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಕಲಾವಿದರ ಭಾವನೆಯಲ್ಲಿ ವಿವಿಧ ವರ್ಣ ವೈವಿಧ್ಯತೆಯ ಗಣೇಶ ವಿಗ್ರಹಗಳು ಅವತರಿಸಿವೆ. ಸುಮಾರು 35 ವರ್ಷಗಳಿಂದ ಗಣೇಶನ ರೂಪಕ್ಕೆ ಮೂರ್ತ ರೂಪ ಕೊಡುವವರು
ಸುಳ್ಯ ಹಳೆಗೇಟಿನ ನಿವೃತ್ತ ಶಿಕ್ಷಕ ಶ್ರೀನಿವಾಸ ರಾವ್. ಕಳೆದ ಮೂರು ದಶಕಗಳಿಂದ ಇವರು ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸುವ ನೂರಾರು ಗಣಪತಿ ವಿಗ್ರಹ ತಯಾರಿಸಿದ್ದಾರೆ. ಈ ಬಾರಿ ಇವರ ಕೈಚಳಕದಲ್ಲಿ 16 ಮನಮೋಹಕ ಗಣಪತಿ ವಿಗ್ರಹಗಳು ಅರಳಿವೆ. ಪೂರ್ತಿಯಾಗಿ ಕೈಯಿಂದಲೇ ವಿಗ್ರಹ ನಿರ್ಮಿಸುವ ಇವರು ಮಣ್ಣಿನಿಂದ ಚಿತ್ತಾಕರ್ಷಕ ಚೈತನ್ಯ ತುಂಬಿದ ವಿಗ್ರಹಗಳನ್ನು ತಯಾರಿಸಿ ಸೈ
ಎನಿಸಿಕೊಂಡವರು.ಹೆಂಚು ನಿರ್ಮಾಣಕ್ಕೆ ಉಪಯೋಗಿಸುವ ಮಣ್ಣನ್ನು ತಂದು ಬೇಕಾದಂತೆ ಹದಗೊಳಿಸಿ ವಿಗ್ರಹ ತಯಾರಿಸುವ ಶ್ರೀನಿವಾಸ ರಾವ್, ಕಬ್ಬಿಣದ ಮೊಳೆ, ಬಿದಿರಿನ ಮೊಳೆ ಮತ್ತಿತರ ಪರಿಕರ ಬಳಸಿ ವಿಗ್ರಹಕ್ಕೆ ಬೇಕಾದ ರೂಪ ಕೊಡುತ್ತಾರೆ. ಬಳಿಕ ಬಣ್ಣ ನೀಡಿ , ಪಾಲೀಶ್ ಹಚ್ಚಿ ವಿಗ್ರಹವನ್ನು ಸುಂದರಗೊಳಿಸುತ್ತಾರೆ . ಗಣೇಶೋತ್ಸವ ಸಮಿತಿಯವರ ಬೇಡಿಕೆ, ಅಕಾರ ಮತ್ತು ಅಳತೆಯಲ್ಲಿ ಗಣೇಶ ಮೂರ್ತಿಗಳನ್ನು ರಚಿಸಿ ನೀಡುತ್ತಾರೆ. ಸುಳ್ಯ ಸಮೀಪ ಪೆರಾಜೆ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾಗಿ ನಿವೃತ್ತರಾದವರು ಶ್ರೀನಿವಾಸ ರಾವ್. ಜುಲೈ ಮೊದಲ ವಾರದಿಂದ ಗಣಪತಿ ವಿಗ್ರಹಗಳ ನಿರ್ಮಾಣ ಕಾರ್ಯ ಆರಂಭಿಸಿದ ಇವರು ಸುಮಾರು 60 ದಿನಗಳಲ್ಲಿ 16 ಸುಂದರ ವಿಗ್ರಹ ತಯಾರಿಸಿದ್ದಾರೆ.
ಸ್ವಂತ ಅಭ್ಯಾಸದಿಂದಲೇ ವಿಗ್ರಹ ತಯಾರಿ:
ವಿಗ್ರಹ ತಯಾರಿಸುವ ಕಲೆಯನ್ನು ಶ್ರೀನಿವಾಸ ರಾವ್ ಎಲ್ಲಿಯೂ ಕಲಿತದ್ದಲ್ಲ. ಹವ್ಯಾಸಕ್ಕಾಗಿ ಹಿಂದೆ ಗಣೇಶೋತ್ಸವಕ್ಕೆ ಮೂರ್ತಿಯನ್ನು ತಯಾರಿಸುತ್ತಿದ್ದರು. ಹಳೆಗೇಟಿನಲ್ಲಿ ವಿಗ್ರಹ ತಯಾರಿಸಲು ಯಾರು ಇಲ್ಲದ ಸಂದರ್ಭ ಬಂದಾಗ ಇವರಲ್ಲಿ ಗಣಪತಿ ವಿಗ್ರಹ ತಯಾರಿಸುವಂತೆ ಸಮಿತಿಯವರು ಬೇಡಿಕೆಯಿಟ್ಟಿದ್ದರು.ಅದರಂತೆ ಮೂರ್ತಿ ಮಾಡಿ ಕೊಟ್ಟರು. ಅಂದು ಪ್ರಾಯೋಗಿಕವಾಗಿ ಆರಂಭಿಸಿದ ಆ ಪಯಣದಲ್ಲಿ ಇಂದಿನವರೆಗೆ ನೂರಾರು ಆಕರ್ಷಕ ಗಣಪತಿ ವಿಗ್ರಹಗಳನ್ನು ನಿರ್ಮಿಸುವ ಮೂಲಕ ಕಲಾ ನೈಪುಣ್ಯತೆ ಮೆರೆದಿದ್ದಾರೆ.ಆರಂಭದಲ್ಲಿ ಒಂದೆರಡು ವಿಗ್ರಹಗಳಷ್ಟೇ ಮಾಡುತ್ತಿದ್ದರು.ನಂತರದ ವರ್ಷಗಳಲ್ಲಿ ಇವರ ಗಣಪತಿ ಮೂರ್ತಿಗೆ ಭಾರಿ ಬೇಡಿಕೆ ಉಂಟಾಯಿತು. ಕೆಲವು ವರ್ಷ
ಶ್ರೀನಿವಾಸ ರಾವ್ ಗಣಪತಿ ವಿಗ್ರಹಗಳ ರಚನೆಯಲ್ಲಿ
20 , 25 ವಿಗ್ರಹಗಳನ್ನು ತಯಾರಿಸಿದ್ದೂ ಇದೆ. ಹಿಂದೆಲ್ಲಾ ಸುಳ್ಯ ಮಾತ್ರವಲ್ಲದೆ ನೆರೆಯ ಕಾಸರಗೋಡು ಜಿಲ್ಲೆಯ ದೇಲಂಪಾಡಿ ,ಅಡೂರು , ಕುಂಟಾರುಗಳಲ್ಲಿನ ಗಣೇಶೋತ್ಸವಕ್ಕೂ ವಿಗ್ರಹ ತಯಾರಿಸಿ ನೀಡುತ್ತಿದ್ದರು. ಗಣೇಶೋತ್ಸವಗಳಿಗೆ ವಿಗ್ರಹ ತಯಾರಿಸಿರುವುದರ ಜತೆ ಮನೆಗಳಲ್ಲಿ ಪೂಜಿಸುವ ಚಿಕ್ಕ ಮೂರ್ತಿಗಳಿಗೂ ಈ ಶಿಕ್ಷಕ ರೂಪ ಕೊಟ್ಟಿದ್ದಾರೆ.
ದೊಡ್ಡ ಮೂರ್ತಿಗೆ ವಾರ ಬೇಕು: ದೊಡ್ಡ ಗಣಪತಿ ವಿಗ್ರಹ ನಿರ್ಮಿಸಲು ಒಂದು ವಾರ ಸಮಯ ಬೇಕಾಗುತ್ತದೆ. ಚಿಕ್ಕ ಮೂರ್ತಿಗಳಾದರೆ 2-3 ದಿನ ಬೇಕು. ಒಂದೊಂದೇ ಹಂತ ತಯಾರಿಸಿ ಅದು ಸ್ವಲ್ಪ ಒಣಗಿದ ಮೇಲೆ
ಉಳಿದ ಭಾಗಗಳನ್ನು ಮಾಡುತ್ತಾರೆ. ಮಣ್ಣನ್ನು ಮಾತ್ರ ಬಳಸಿ ಪರಿಸರ ಸ್ನೇಹಿ ವಿಗ್ರಹಗಳನ್ನು ತಯಾರಿಸುವ ಇವರು ಶಾಲೆ ಮಕ್ಕಳಿಗೆ ಮತ್ತು ಪರಿಸರದ ಆಸಕ್ತರಿಗೆ ವಿಗ್ರಹ ತಯಾರಿ ಕಲೆ ಕಲಿಸುತ್ತಾರೆ. ವೇದಿಕೆಗಳನ್ನು ಅಲಂಕರಿಸುವುದರಲ್ಲಿಯೂ ಇವರು ನಿಸ್ಸೀಮರು. ವರ್ಲಿ ಚಿತ್ರ ಕಲಾವಿದರೂ ಆಗಿರುವ ಶ್ರೀನಿವಾಸ ಮಾಸ್ತರ್ ತನ್ನ ವಿದ್ಯಾರ್ಥಿಗಳಿಗೆ ವರ್ಲಿ ಚಿತ್ರಕಲೆ,ಮಣ್ಣಿನ ಮಾದರಿ ತಯಾರಿ , ವಿಗ್ರಹಗಳ ರಚನಾ ಕೌಶಲ್ಯ ಕಲಿಸುತ್ತಾರೆ.
ನಾಡಿನಾದ್ಯಂತ ಗಣೇಶೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ಕೆಲವೆಡೆ ಒಂದು ದಿನ ಗಣೇಶೋತ್ಸವ ನಡೆದರೆ ಕೆಲವಡೆ, 3, 5, 7 ದಿನಗಳ ಕಾಲ ಸಂಭ್ರಮದ ಗಣೇಶೋತ್ಸವ ನಡೆಯುತ್ತದೆ.