*ವರದಿ:ಎಂ.ನಾ.ಚಂಬಲ್ತಿಮಾರ್.
ಕಾಸರಗೋಡು:ಸುದೀರ್ಘ 25ವರ್ಷಗಳ ಬಳಿಕ ಮಹಾ ಕಳಿಯಾಟ ಮಹೋತ್ಸವ ನಡೆಯುತ್ತಿರುವ ಕಾಸರಗೋಡಿನ ತ್ರಿಕರಿಪುರದ ರಾಮವಿಲ್ಯಂ ಕಳಿಯಾಟ ಉತ್ಸವಕ್ಕೆ ಕೇಂದ್ರ ಸಚಿವ, ಪ್ರಸಿದ್ಧ ಚಿತ್ರನಟ, ಬಿಜೆಪಿ ನಾಯಕ ಸುರೇಶ್ ಗೋಪಿ ಆಗಮಿಸಿದರು. 28ವರ್ಷಗಳ ಹಿಂದೆ ತನಗೆ ಅತ್ಯುತ್ತಮ ನಟನೆಂಬ ರಾಷ್ಟ್ರೀಯ ಪ್ರಶಸ್ತಿ ಮುಡಿಸಿ, ಕೀರ್ತಿ ನೀಡಿದ “ಕಳಿಯಾಟಂ” ಚಿತ್ರದಲ್ಲಿ ತೈಯ್ಯಂ ಕಲಾವಿದನಾಗಿ ಅದ್ಭುತ ಅಭಿನಯ
ನೀಡಿದ ಅದೇ ನಟ ಇಂದೀಗ ಪೆರುಂಕಳಿಯಾಟ ಸನ್ನಿಧಿಯಲ್ಲಿ ದೈವಗಳಿಗೆ ತಲೆಬಾಗಿ ಅರಶಿನಕುಂಕುಮ ಪ್ರಸಾದ ಪಡೆದು, ಹಣೆಗೆ ಹಚ್ಚಿಕೊಂಡು ವಿನೀತ ಭಾವದಲ್ಲಿ ನಿಂತಾಗ ಸುತ್ತಲೂ ನೆರೆದ ನೂರಾರು ಭಕ್ತರು ಮೂಕ ವಿಸ್ಮಿತರಾದರು.ಕಾಸರಗೋಡು ಜಿಲ್ಲೆಗೆ ಆಗಮಿಸಿದ ಕೇಂದ್ರ ಪೆಟ್ರೋಲಿಯಂ ಖಾತೆ ಸಹ ಸಚಿವ ಸುರೇಶ್ ಗೋಪಿ
ಈ ಸಂದರ್ಭ ತ್ರಿಕರಿಪುರದಲ್ಲಿ ಮಹಾ ಕಳಿಯಾಟ ಮಹೋತ್ಸವ ನಡೆಯುವುದನ್ನರಿತು ಅಲ್ಲಿಗೆ ತೆರಳಿ ದೈವಗಳ ಮುಂದೆ ತಲೆಬಾಗಿ ನಿಂತರು.ದೈವಗಳಿಂದ ಶುಭನುಡಿಗಳ ಆಶೀರ್ವಾದ ಪಡೆದ ಅವರನ್ನು

ಕಳಿಯಾಟ ಸಮಿತಿ ಪದಾಧಿಕಾರಿಗಳು ಸ್ವಾಗತಿಸಿಕೊಂಡರು. ಕೇಂದ್ರ ಸಚಿವರ ಜತೆ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ ಮತ್ತು ಪ್ರಾದೇಶಿಕ ನಾಯಕ, ಕಾರ್ಯಕರ್ತರಿದ್ದರು.
ಕಳಿಯಾಟದಂಗಳದಲ್ಲಿ ಒಂದಷ್ಟು ಹೊತ್ತು ವ್ಯಯಿಸಿ ಜನರ ಜತೆ ಬೆರೆತ ನಟ, ಸಚಿವ ಬಳಿಕ ತೈಯ್ಯಂ ಕಲಾವಿದರನ್ನು ಮತ್ತು ಕಳಿಯಾಟ ಕೋಲ ಕಟ್ಟಲು ವ್ರತಾಧಾರಿಗಳಾಗಿರುವ ಪೆರುವಣ್ಣಾನ್ ಅವರನ್ನು ಸಂದರ್ಶಿಸಿ, ಮಾತಾಡಿಸಿಕೊಂಡರು. ಈ ಸಂದರ್ಭ ತಾನು ಇಂಥದೇ ಪಾತ್ರ ಮಾಡಿದ ಅನುಭವದ ನೆನಪಿಗೂ ಅವರು ಜಾರಿಕೊಂಡರು. 28 ವರ್ಷಗಳ ಹಿಂದೆ ಇಂಥದೇ ಕಳಿಯಾಟದ ಕಥಾ ಹಂದರವುಳ್ಳ ಜಯರಾಜನ್ ನಿರ್ದೇಶನದ “ಕಳಿಯಾಟ್ಟಂ” ಚಿತ್ರದಲ್ಲಿ ಸುರೇಶ್ ಗೋಪಿ ನಾಯಕನಾಗಿದ್ದರು.

1997ರ ಈ ಚಿತ್ರದ ಕಣ್ಣನ್ ಪೆರುವಣ್ಣಾನ್ ಪಾತ್ರಕ್ಕೆ ಅವರಿಗೆ ಅತ್ಯುತ್ತಮ ನಟನೆಂಬ ರಾಷ್ಟ್ರ ಪ್ರಶಸ್ತಿ ಒಲಿದಿತ್ತು. ಇದೀಗ ಮತ್ತೊಮ್ಮೆ “ಒರು ಪೆರುಂಕಳಿಯಾಟ್ಟಂ” ಎಂಬ ಅಂಥದೇ ಕತೆಯ ಮೂಲಕ ಮತ್ತೊಮ್ಮೆ ಇದೇ ಜೋಡಿ ಒಂದಾಗುವ ಘೋಷಣೆಯಾದ ಬೆನ್ನಲ್ಲೇ ಸುರೇಶ್ ಗೋಪಿಯವರು ಕಳಿಯಾಟದಂಗಳಕ್ಕೆ ಕಾಲೂರಿದ್ದಾರೆ.ಈ ಚಿತ್ರದಲ್ಲೂ ಸುರೇಶ್ ಗೋಪಿ ತೈಯ್ಯಂ ಕಟ್ಟುವ ಪೆರುವಣ್ಣಾನ್ ಆಗಿ ಮತ್ತೊಮ್ಮೆ ಅಭಿನಯಿಸಲಿದ್ದಾರೆ.
ಹೀಗೆಂದು ಘೋಷಿಸಿಕೊಂಡರೂ ಅವರಿಗೀಗ ಕೇಂದ್ರ ಸಚಿವ, ಸಂಸದರ ಹೊಣೆಗಾರಿಕೆಯೂ ಇದೆ. ಈ ಮಧ್ಯೆ ದೈವಗಳಿಗೆ ಕೈಮುಗಿದ ಸುರೇಶ್ ಗೋಪಿಗೆ ದೈವಗಳು ಮಪದಿಂಗಿತ ನೆರವೇರುವ ಭರವಸೆಯನ್ನೂ ಇತ್ತಿದೆ.
