ಮ್ಯಾಂಚೆಸ್ಟರ್: ಭಾರತದ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಜೋ ರೂಟ್ ಸಿಡಿಸಿದ ಶತಕ ಹಾಗೂ ಅಗ್ರ ಕ್ರಮಾಂಕದ ಜಾಕ್ ಕ್ರಾಲಿ, ಬೆನ್ ಡಕೆಟ್ ಹಾಗೂ ಓಲಿ ಪೋಪ್ ಅವರ ಅರ್ಧಶತಕಗಳ ಬಲದಿಂದ ಮೊದಲ ಇನಿಂಗ್ಸ್ನಲ್ಲಿ 3ನೇ ದಿನದಾಟದ ಅಂತ್ಯಕ್ಕೆ
7 ವಿಕೆಟ್ ನಷ್ಟಕ್ಕೆ 544 ರನ್ ಗಳಿಸಿದೆ.ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 358 ರನ್ ಗಳಿಸಿ ಆಲೌಟ್ ಆಗಿತ್ತು. ಇಂಗ್ಲೆಂಡ್ 186 ರನ್ ಮುನ್ನಡೆ ಸಾಧಿಸಿದೆ.ಆರಂಭಿಕರಾದ ಕ್ರಾಲಿ ಹಾಗೂ ಡಕೆಟ್ ಜೋಡಿ ಮೊದಲ ವಿಕೆಟ್ಗೇ 166 ರನ್ ಸೇರಿಸುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟಿತು. ಅದರ ಮೇಲೆ ರೂಟ್ ಹಾಗೂ ಪೋಪ್ ಇನ್ನೀಂಗ್ಸ್ ಕಟ್ಟಿದರು.ಕ್ರಾಲಿ (84 ರನ್) ಹಾಗೂ ಡಕೆಟ್ (94 ರನ್) ಶತಕದ ಹೊಸ್ತಿಲಲ್ಲಿ ಎಡವಿದರೆ, ಪೋಪ್ 71 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಜೋರೂಟ್ 150 ರನ್ ಸಿಡಿಸಿದರೆ, ನಾಯಕ ಬೆನ್ ಸ್ಟೋಕ್ಸ್ ಅಜೇಯ 77 ರನ್ ಸಿಡಿಸಿದರು. ಭಾರತ ಪರ ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜ ತಲಾ 2 ವಿಕೆಟ್ ಉರುಳಿಸಿದ್ದಾರೆ. ಜಸ್ಪ್ರೀತ್ ಬೂಮ್ರಾ, ಅನ್ಶುಲ್ ಕಾಂಬೋಜ್ ಮತ್ತು ಮಹಮ್ಮದ್ ಸಿರಾಜ್ ಒಂದೊಂದು ವಿಕೆಟ್ ಪಡೆದಿದ್ದಾರೆ.
ಜೋ ರೂಟ್ 248 ಎಸೆತಗಳನ್ನು ಎದುರಿಸಿ, 14 ಬೌಂಡರಿ ಸಹಿತ 150 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅವರು ಗಳಿಸಿದ 38ನೇ ಶತಕ ಇದಾಗಿದೆ. ಇದರೊಂದಿಗೆ ಅವರು ಶ್ರೀಲಂಕಾದ ಕುಮಾರ ಸಂಗಕ್ಕಾರ ದಾಖಲೆಯನ್ನು ಸರಿಗಟ್ಟಿದ್ದಾರೆ. ಶತಕ ಗಳಿಕೆ ಪಟ್ಟಿಯಲ್ಲಿ ಮಾಜಿ ಕ್ರಿಕೆಟಿಗರಾದ ಭಾರತದ ಸಚಿನ್ ತೆಂಡೂಲ್ಕರ್ (51), ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ (45) ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (41) ರೂಟ್ಗಿಂತ ಮುಂದಿದ್ದಾರೆ.















