ಕಣ್ಣೂರು:ಕಣ್ಣೂರು ಸೆಂಟ್ರಲ್ ಜೈಲಿನಿಂದ ಪರಾರಿಯಾದ ಅರಾಧಿಯನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. 2011ರಲ್ಲಿ ಕೇರಳದಲ್ಲಿ ನಡೆದ ಸೌಮ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಗೋವಿಂದಚಾಮಿ ಕೇರಳದ ಕಣ್ಣೂರು ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ. ಕಟ್ಟಡವೊಂದರ ಬಳಿ
ಬಾವಿಯಲ್ಲಿ ಅವಿತು ಕುಳಿತಿದ್ದ ಈತನನ್ನು ಸಾರ್ವಜನಿಕರ ನೆರವಿನಿಂದ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಬೆಳಗಿನ ಜಾವ ತಪಾಸಣೆ ನಡೆಸುತ್ತಿದ್ದಾಗ ಜೈಲು ಅಧಿಕಾರಿಗಳಿಗೆ ಗೋವಿಂದಚಾಮಿ ನಾಪತ್ತೆಯಾಗಿರುವುದು ಕಂಡು ಬಂದಿದೆ. ಜೈಲು ಅಧಿಕಾರಿಗಳು ತಕ್ಷಣ ಜೈಲು ಆವರಣದ ಸುತ್ತಮುತ್ತ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಆತ ಎಲ್ಲಿಯೂ ಪತ್ತೆಯಾಗಲಿಲ್ಲ. ಬಳಿಕ ಆತನಿಗಾಗಿ ನಡೆದ ಹುಡುಕಾಟದಲ್ಲಿ ಸೆರೆ ಸಿಕ್ಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
2011ರ ಫೆಬ್ರವರಿ 1ರಂದು ಎರ್ನಾಕುಲಂನಿಂದ ಶೊರ್ನೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದಾಗ 23ರ ಹರೆಯದ ಸೌಮ್ಯಾ ಅವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಬಳಿಕ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.














