ಸುಳ್ಯ:ಕಳೆದ 15 ದಿನಗಳಿಂದ ನಾನು ಊರಿಗೆ ಬಂದು ಜಾಲ್ಸೂರಿನ ಎರ್ಮೆಕಾರ್ನ ಮನೆಯಲ್ಲಿ ಇದ್ದೇನೆ. ಈ 15 ದಿನದಲ್ಲಿ ಒಟ್ಟು 13-14 ಗಂಟೆ ವಿದ್ಯುತ್ ಮಾತ್ರ ಲಭಿಸಿದೆ. ಒಂದು ದಿನವೂ ದಿನಪೂರ್ತಿ ವಿದ್ಯುತ್ ಇರಲಿಲ್ಲ. ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಜನರು ಬದುಕುವುದು ಹೇಗೆ..? ವಿಕಸಿತ ಭಾರತ ಅಂದರೆ ಇದೇನಾ..? ಹೀಗೆ ಪ್ರಶ್ನಿಸಿದವರು ಖ್ಯಾತ ಪರಿಸರ ತಜ್ಞ, ಗುಜರಾತ್ನ ಉದ್ಯಮಿ ಡಾ.ಆರ್.ಕೆ.ನಾಯರ್. ರಜಾ ದಿನಗಳನ್ನು ಕಳೆಯಲು ಅವರು ಕುಟುಂಬ ಸಮೇತರಾಗಿ
ತನ್ನ ಗ್ರಾಮ ಜಾಲ್ಸೂರಿಗೆ ಬಂದಿದ್ದಾರೆ. 15 ದಿನಗಳಿಂದ ಊರಿನ ವಾಸದಲ್ಲಿ ಈ ಊರಿನ ವಿದ್ಯುತ್ ಸಮಸ್ಯೆಯ ಆಳ ಅಗಲವನ್ನು ಅರಿತಿದ್ದಾರೆ. ವಿದ್ಯುತ್ ಇಲ್ಲದ ಬವಣೆಯ ಬದುಕನ್ನು ‘ಸುಳ್ಯ ಮಿರರ್’ ಜೊತೆ ಹಂಚಿಕೊಂಡಿದ್ದಾರೆ. 15 ದಿನಗಳಿಂದ ಊರಲ್ಲಿ ಇದ್ದೇನೆ. ನಾನು ಇರುವ ಪ್ರದೇಶದಲ್ಲಿ ಒಂದು ದಿನವೂ ದಿನಪೂರ್ತಿ ಕರೆಂಟ್ ಇರಲಿಲ್ಲ. 15 ದಿನದಲ್ಲಿ ಒಟ್ಟು 13-14 ಗಂಟೆ ವಿದ್ಯುತ್ ಸರಬರಾಜು ಇತ್ತು. ಅಂದರೆ ದಿನಕ್ಕೆ ಒಂದು ಗಂಟೆ ಕೂಡ ಸರಿ ಕರೆಂಟ್ ಇರಲಿಲ್ಲ. ಮಕ್ಕಳು ಎಲ್ಲರೂ ಬಂದಿರುವ ಕಾರಣ ಅವರಿಗೆ ಮೊಬೈಲ್, ವೈಫೈ, ಇಂಟರ್ನೆಟ್, ಲ್ಯಾಪ್ಟಾಪ್ ಅಗತ್ಯವಾಗಿ ಬೇಕಾಗಿದೆ. ಅಲ್ಲದೆ ಫ್ಯಾನ್, ಗ್ರೈಂಡರ್, ಮಿಕ್ಸಿ, ಲೈಟ್ ಸೇರಿ ಮನೆಯ ಅಗತ್ಯಕ್ಕೂ ವಿದ್ಯುತ್ ಬೇಕಾಗಿದೆ. ಕರೆಂಟ್ ಇಲ್ಲದ ಕಾರಣ ದಿನದ 24 ಗಂಟೆಯೂ ಜನರೇಟರ್ ಚಾಲೂ ಮಾಡಬೇಕಾದ ಸ್ಥಿತಿ ಇದೆ. ತನಗೆ 15 ದಿನದಲ್ಲಿ ಸುಮಾರು 60 ಸಾವಿರ ರೂ ಜನರೇಟರ್ಗೆ ಡೀಸಿಲ್ ಹಾಕಲು ಖರ್ಚಾಯಿತು ಎಂದು ಹೇಳಿದ್ದಾರೆ.
ಮಳೆಗಾಲ, ಬೇಸಿಗೆ ಕಾಲ ಹೀಗೆ ಯಾವ ಕಾಲದಲ್ಲಿಯೂ ಇಲ್ಲಿ ವಿದ್ಯುತ್ ಇರುವುದಿಲ್ಲ. ಹೀಗಾದರೆ ಸುಳ್ಯ ತಾಲೂಕಿನ ಗ್ರಾಮೀಣ ಭಾಗದ ಪರಿಸ್ಥಿತಿ ಏನು..? ಗ್ರಾಮೀಣ ಭಾಗದ ಜನರು ಬದುಕುವುದಾರೂ ಹೇಗೆ.. ವಿಕಸಿತ ಭಾರತ ಅಂದರೆ ಇದೇನಾ ಎಂದು ಅವರು ಪ್ರಶ್ನಿಸಿದರು. ಕಳೆದ ಅನೇಕ ದಶಕಗಳಿಂದ ಇಲ್ಲಿ ವಿದ್ಯುತ್ ಸಮಸ್ಯೆ ತಾಂಡವವಾಡುತಿದೆ. ಇಲ್ಲಿನ ಜನ ಪ್ರತಿನಿಧಿಗಳು, ಸಂಬಂಧಪಟ್ಟವರು ಏನು ಮಾಡುತ್ತಿದ್ದಾರೆ ಎಂದು ಡಾ.ಆರ್.ಕೆ.ನಾಯರ್ ಕೇಳುತ್ತಿದ್ದಾರೆ. ಗ್ರಾಮೀಣ ಪ್ರದೇಶ ಅಂದರೆ ಕಾಡು, ಮರ, ತೋಟ, ಗುಡ್ಡಗಾಡು ಎಲ್ಲವೂ ಇರುತ್ತದೆ.
ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್ ಕಟ್ಗೆ ಸಬೂಬು ಹೇಳುವ ಬದಲು ಅದಕ್ಕೆ ಸೂಕ್ತವಾದ ವ್ಯವಸ್ಥೆ ಮಾಡಿಕೊಳ್ಳಬೇಕು. ನಿರಂತರ 15-20 ದಿನ ವಿದ್ಯುತ್ ಇಲ್ಲದೆ ಈಗಿನ ಕಾಲದಲ್ಲಿ ಜನರು ಬದುಕುವುದು ಹೇಗೆ ಎಂದು ಡಾ.ಆರ್.ಕೆ.ನಾಯರ್ ಪ್ರಶ್ನಿಸಿದ್ದಾರೆ. ಗುಜರಾತ್ನಂತಹಾ ರಾಜ್ಯದಲ್ಲಿ ಸಿಟಿ, ಗ್ರಾಮೀಣ ಸೇರಿದಂತೆ ದಿನದ 24 ಗಂಟೆಯೂ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗುವುದಾದರೆ ಇಲ್ಲಿ ಕರ್ನಾಟಕದಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ.. ಆ ಇಚ್ಛಾಶಕ್ತಿ ಇಲ್ಲಿ ಯಾಕೆ ಇಲ್ಲ.. ಡಾ.ಆರ್.ಕೆ.ನಾಯರ್ ಪ್ರಶ್ನಿಸುತ್ತಾರೆ…?