ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪರ ಚುನಾವಣಾ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸಲಿದ್ದಾರೆ ಎಂದು ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪರ ಚುನಾವಣಾ ಪ್ರಚಾರಕ್ಕೆ
ಈಗಾಗಲೇ ಕುದ್ರೋಳಿ ದೇವಸ್ಥಾನದ ಮುಂಭಾಗ ಚಾಲನೆ ನೀಡಲಾಗಿದೆ. ಚುನಾವಣಾ ಕಚೇರಿಯೂ ಉದ್ಘಾಟನೆಗೊಂಡಿದೆ. ಮುಂದೆ ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ತೆರಳಿ ಪ್ರಚಾರ ಕಾರ್ಯ ನಡೆಸಲಾಗುವುದು. ಪ್ರಚಾರ ಕಾರ್ಯಕ್ಕೆ ಇನ್ನಷ್ಟು ಶಕ್ತಿ ತುಂಬಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸಲಿದ್ದಾರೆ ಎಂದರು.
ಏ.3ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿ ಹಾಗೂ ಪ್ರಮುಖರು ಆಗಮಿಸಿ ಪ್ರಚಾರ ನಡೆಸಲಿದ್ದಾರೆ. ಏ.11ರಂದು ಸುಳ್ಯ, 12ರಂದು ಮುಲ್ಕಿ, 13ರಂದು ಪುತ್ತೂರು,14ರಂದು ಮಂಗಳೂರು ದಕ್ಷಿಣ, 15ರಂದು ಉಳ್ಳಾಲ, 16ರಂದು ಮಂಗಳೂರು ಉತ್ತರ, 17ರಂದು ಬೆಳ್ತಂಗಡಿ, 18ರಂದು ಬಂಟ್ವಾಳಕ್ಕೆ ಅಭ್ಯರ್ಥಿ ಸಹಿತ ಆಗಮಿಸಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಪುತ್ತೂರಿಗೆ ಆಗಮಿಸಿ, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಲಿದ್ದಾರೆ ಎಂದರು. ಏ. 19ರಿಂದ ಎರಡನೇ ಸುತ್ತಿನ ಪ್ರಚಾರ ಕಾರ್ಯ ನಡೆಯಲಿದೆ. ಮಾ. 24ಕ್ಕೆ ಪ್ರಚಾರ ಕಾರ್ಯ ಅಂತ್ಯವಾಗಲಿದ್ದು, 26ರಂದು ಚುನಾವಣೆ ನಡೆಯಲಿದೆ ಎಂದು ವಿವರಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ,ಚುನಾವಣಾ ಉಸ್ತುವಾರಿ ರಮಾನಾಥ ರೈ,ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿ ಪದ್ಮರಾಜ್ ಆರ್., ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಶಕುಂತಳಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಮುಡಾ ಅಧ್ಯಕ್ಷ ಸದಾಶಿವ ಉಲ್ಲಾಳ್, ಪ್ರಮುಖರಾದ ಯು.ಕೆ. ಮೋನು, ಶಾಹುಲ್ ಹಮೀದ್ ಉಪಸ್ಥಿತರಿದ್ದರು.