ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆ ಸದ್ಯದಲ್ಲೇ ಪೋಡಿಮುಕ್ತ ಜಿಲ್ಲೆ ಆಗಲಿದೆ. ಸರಕಾರ ವಿಶೇಷ ಕಾಳಜಿ, ಸಾಕಷ್ಟು ಶ್ರಮ ವಹಿಸಿ ಜಿಲ್ಲೆಯನ್ನು ಪೋಡಿಮುಕ್ತ ಮಾಡುವ ದಿಕ್ಕಿನಲ್ಲಿ ಕೆಲಸಗಳು ಆಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಪ್ರಜಾಸೌಧ ಕಟ್ಟಡವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಹತ್ತು ವರ್ಷಗಳ ಹಿಂದೆ ತಾವೇ ಗುದ್ದಲಿ ಪೂಜೆ ಮಾಡಿದ್ದ
ಕಟ್ಟಡವನ್ನು ಈಗ ತಾವೇ ಉದ್ಘಾಟಿಸುತ್ತಿರುವುದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4.5 ಲಕ್ಷ ಕೋಟಿ ತೆರಿಗೆ ಕೊಡ್ತೀವಿ, ಕೇಂದ್ರ ರಾಜ್ಯಕ್ಕೆ ವಾಪಾಸ್ ಕೊಡುವುದು, ಸ್ಮಾರ್ಟ್ ಸಿಟಿ ಯೋಜನೆ ಸೇರಿ ಕೇವಲ 65 ಸಾವಿರ ಕೋಟಿ. ಶೇ15-16 ರಷ್ಟು ಮಾತ್ರ ವಾಪಾಸ್ ಕೊಡುತ್ತಿದೆ ಎಂದು ಹೇಳಿದರು.

ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ.ಮನುಷ್ಯರು ಮನುಷ್ಯರನ್ನು ಪ್ರೀತಿಸುವ ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು.ಈ ಸಮಾಜವನ್ನು ನಾವು ಇನ್ನಷ್ಟು ಗಟ್ಟಿಗೊಳಿಸೋಣ. ಜೊತೆಗೆ ಅಸಮಾನತೆಯ ಸಮಾಜವನ್ನು ಸುಧಾರಿಸಿ ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಸಮಾಜ ಕಟ್ಟೋಣ ಎಂದು ಕರೆ ನೀಡಿದರು.
ನಾವು ನುಡಿದಂತೆ ನಡೆದಿದ್ದೇವೆ. ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಕೊಡುವ ಭರವಸೆ ನೀಡಿದ್ದೆವು. ಅದರಂತೆ ಪುತ್ತೂರಿಗೂ ಮೆಡಿಕಲ್ ಕಾಲೇಜು ಕೊಟ್ಟಿದ್ದೇವೆ. ಸದ್ಯ 250 ಬೆಡ್ಗಳ ಆಸ್ಪತ್ರೆ ಮಾಡ್ತೀವಿ. ಆಮೇಲೆ ಮತ್ತೆ 250 ಬೆಡ್ ಗಳನ್ನು ವಿಸ್ತರಿಸುತ್ತೇವೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಸ್ಪೀಕರ್ ಯು.ಟಿ.ಖಾದರ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಮತ್ತಿತರರು ಉಪಸ್ಥಿತರಿದ್ದರು.