ಸುಳ್ಯ:ಬಿಜೆಪಿ ಸುಳ್ಯ ಮಂಡಲ ಸಮಿತಿಯ ವತಿಯಿಂದ ಬಿಜೆಪಿ ಬೆಂಬಲಿತ ಚುನಾಯಿತ ಸಹಕಾರಿಗಳ ಸಮಾವೇಶ ಮೇ.17ರಂದು ಸುಳ್ಯ ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.ಶಾಸಕಿ ಭಾಗೀರಥಿ ಮುರುಳ್ಯ ಸಮಾವೇಶವನ್ನು ಉದ್ಘಾಟಿಸಿದರು. ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ
ಪ್ರತಾಪ ಸಿಂಹ ನಾಯಕ್, ಹಿರಿಯ ಸಹಕಾರಿ, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷ ಎ.ವಿ.ವಿಕ್ರಮ್ ಅಡ್ಪಂಗಾಯ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿನಯ ಮುಳಿಗಾಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ರೈ ಮನವಳಿಕೆ ಸ್ವಾಗತಿಸಿ, ವಿನಯಕುಮಾರ್ ಕಂದಡ್ಕ ಕಾರ್ಯಕ್ರಮ ನಿರೂಪಿಸಿದರು.

ಸಹಕಾರಿ ವಿಚಾರಗೋಷ್ಠಿ:
ಉದ್ಘಾಟನೆಯ ಬಳಿಕ ವಿಚಾರಗೋಷ್ಠಿ ನಡೆಯಿತು.
ಹಿರಿಯ ಸಹಕಾರಿ, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ‘ಗ್ರಾಮದ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಮತ್ತು ನಿರ್ದೇಶಕರ ಪಾತ್ರ’ ಎಂಬ ವಿಷಯದ ಬಗ್ಗೆ ಮಾತನಾಡಿದರು ‘ಸಹಕಾರಿ ಕ್ಷೇತ್ರ ನಮ್ಮ ಹಿರಿಯರಿಂದ ಬಂದ ಬಳುವಳಿ. ಅದರ ಸಮಗ್ರ ಅಭಿವೃದ್ಧಿಗೆ ಎಲ್ಲರ ನಿರಂತರ ಪ್ರಯತ್ನ ನಡೆಸಬೇಕು. ಸಹಕಾರಿ ಸಂಘದ ಬೈಲಾವನ್ನು ಕಡ್ಡಾಯವಾಗಿ ಓದಬೇಕು,ಸದಸ್ಯರ ಆಶೋತ್ತರಗಳನ್ನು ಈಡೇರಿಸಲು ಪ್ರಯತ್ನ ನಡೆಸಬೇಕು. ಹೊಸ ಆಲೋಚನೆ ಮೂಲಕ ಮಾದರಿಯಾದ ಸಹಕಾರ ಸಂಘವನ್ನು ಕಟ್ಟುವ ಕೆಲಸ ಆಗಬೇಕು ಎಂದು ಅವರು ಹೇಳಿದರು.ಭಾರತದ ಮೊತ್ತಮೊದಲ ಸಹಕಾರಿ ವಿವಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ದೊಡ್ಡ ಕೊಡುಗೆ ಎಂದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೃಷ್ಣ ಶೆಟ್ಟಿ ಕಡಬ ಅಧ್ಯಕ್ಷತೆ ವಹಿಸಿದ್ದರು.

ವಿಧಾನ ಪರಿಷತ್ ಪ್ರತಾಪಸಿಂಹ ನಾಯಕ್ ‘ಸಹಕಾರಿ ನಿರ್ದೇಶಕರು ಮತ್ರು ಸಂಘಟನೆ’ ಎಂಬ ವಿಚಾರದ ಬಗ್ಗೆ ಮಾತನಾಡಿ ‘ತಮಗೆ ದೊರೆತ ನಿರ್ದೇಶಕ ಸ್ಥಾನ ಅಧಿಕಾರ ಎಂದು ತಿಳಿಯದೆ ಅವಕಾಶ ಎಂದು ತಿಳಿದುಕೊಳ್ಳಬೇಕು. ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು, ಪಕ್ಷದ ಜೊತೆ, ಮತ ಹಾಕಿದ ಜನರೊಂದಿಗೆ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು. ಸಹಕಾರ ಭಾರತಿ ತಾಲೂಕು ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ ಸಹಕಾರಿ ಸಂಘಗಳ ನಿರ್ದೇಶಕರು ಸಮಾವೇಶದಲ್ಲಿ ಭಾಗವಹಿಸಿದ್ದರು.