ಅಹಮದಾಬಾದ್: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿತು.
ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡವು 6 ವಿಕೆಟ್ಗಳಿಂದ ಆತಿಥೇಯ ಗುಜರಾತ್ ವಿರುದ್ಧ ಜಯಿಸಿತು. ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.ಮುಕೇಶ್ (14ಕ್ಕೆ3) ಮತ್ತು ಇಶಾಂತ್ (8ಕ್ಕೆ2) ಅವರ
ದಾಳಿಯ ಮುಂದೆ ಗುಜರಾತ್ ತಂಡವು 17.3 ಓವರ್ಗಳಲ್ಲಿ 89 ರನ್ಗಳ ಅಲ್ಪಮೊತ್ತ ಗಳಿಸಿ ಆಲೌಟ್ ಆಯಿತು. ಈ ಬಾರಿಯ ಐಪಿಎಲ್ನಲ್ಲಿ ದಾಖಲಾದ ಕನಿಷ್ಠ ಮೊತ್ತ ಇದು. ಇದಕ್ಕುತ್ತರವಾಗಿ ಡೆಲ್ಲಿ ತಂಡವು 8.5 ಓವರ್ಗಳಲ್ಲಿ 4 ವಿಕೆಟ್ಗಳಿಗೆ 92 ರನ್ ಗಳಿಸಿತು.
ಗುಜರಾತ್ ತಂಡದ ಎಂಟನೇ ಕ್ರಮಾಂಕದ ಬ್ಯಾಟರ್ ರಶೀದ್ ಖಾನ್ 24 ಎಸೆತಗಳಲ್ಲಿ 31 ರನ್ ಗಳಿಸಿದರು. ವೈಯಕ್ತಿಕ ಗರಿಷ್ಠ ಸ್ಕೋರ್ ಗಳಿಸಿದ ಆಟಗಾರನಾದರು. ಇಡೀ ಇನಿಂಗ್ಸ್ನಲ್ಲಿ ದಾಖಲಾದ ಏಕೈಕ ಸಿಕ್ಸರ್ ಕೂಡ ರಶೀದ್ ಕಾಣಿಕೆ. ಈ ಇನಿಂಗ್ಸ್ನಲ್ಲಿ ಒಟ್ಟು ಎಂಟು ಬೌಂಡರಿಗಳು ಮಾತ್ರ ದಾಖಲಾದವು. ರಶೀದ್ ಬಿಟ್ಟರೆ ಸಾಯಿ ಸುದರ್ಶನ್ (12; 9ಎ) ಮತ್ತು ರಾಹುಲ್ ತೆವಾಟಿಯಾ (10; 15ಎ) ಅವರಿಬ್ಬರೇ ಎರಡಂಕಿ ಮುಟ್ಟಿದವರು. ಉಳಿದ ಬ್ಯಾಟರ್ಗಳೆಲ್ಲರೂ ವೈಫಲ್ಯ ಅನುಭವಿಸಿದರು.
ಡೆಲ್ಲಿ ಆರಂಭಿಕ ಬ್ಯಾಟರ್ ಜೇಕ್ ಫ್ರೆಸರ್ ಮೆಕ್ಗುರ್ಕ್ (20; 10ಎ) ಬಿರುಸಿನ ಆರಂಭ ನೀಡಿದರು. ರಿಷಭ್ ಪಂತ್ 11 ಎಸೆತಗಳಲ್ಲಿ 16 ರನ್ ಗಳಿಸಿ ಔಟಾಗದೇ ಉಳಿದು ತಂಡವನ್ನು ಜಯದ ಗಡಿ ದಾಟಿಸಿದರು. 7ನೇ ಪಂದ್ಯ ಆಡಿದ ಡೆಲ್ಲಿ ತಂಡವು ಮೂರನೇ ಜಯ ಸಾಧಿಸಿತು. ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿತು. ಗಿಲ್ ಬಳಗಕ್ಕೆ ಇದು ನಾಲ್ಕನೇ ಸೋಲು.