ನವದೆಹಲಿ: ರೋಚಕ ಹೋರಾಟ ಕಂಡ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ತಂಡ, ಗುಜರಾತ್ ಟೈಟನ್ಸ್ ತಂಡದ ತೀವ್ರ ಹೋರಾಟವನ್ನು ಮೆಟ್ಟಿನಿಂತು ನಾಲ್ಕು ರನ್ಗಳ ಗೆಲುವು ಪಡೆಯುವಲ್ಲಿ ಯಶಸ್ವಿಯಾಯಿತು. ಡೆಲ್ಲಿ 20 ಓವರ್ಗಳಲ್ಲಿ 4 ವಿಕೆಟ್ಗೆ 224 ರನ್ಗಳ ದೊಡ್ಡ ಮೊತ್ತ ಗಳಿಸಿತು.ಇದಕ್ಕೆ ಉತ್ತರವಾಗಿ ಗುಜರಾತ್ ಟೈಟನ್ಸ್ ತಂಡ 8 ವಿಕೆಟ್ಗೆ 220 ರನ್ ಗಳಿಸಿತು.ಡೆಲ್ಲಿ ಪರ
ನಾಯಕ ಋಷಬ್ ಪಂತ್ (88, 43 ಎ, 4×5, 6×8) ಮತ್ತು ಅಕ್ಷರ್ ಪಟೇಲ್ (66, 43 ಎಸೆತ) ಕೇವಲ 68 ಎಸೆತಗಳಲ್ಲಿ 113 ರನ್ ಜೊತೆಯಾಟದ ನೆರವಿನಿಂದ ದೊಡ್ಡ ಮೊತ್ತ ಗಳಿಸಲು ಸಹಾಯಕವಾಯಿತು. ಕೊನೆಯ ಐದು ಓವರ್ಗಳಲ್ಲಿ ಡೆಲ್ಲಿ 95 ರನ್ಗಳನ್ನು ಬಾಚಿಕೊಂಡಿತು. ಇದಕ್ಕೆ ಟ್ರಿಸ್ಟನ್ ಸ್ಟಬ್ಸ್ (26, 7ಎಸೆತ) ಅವರ ಕೊಡುಗೆಯೂ ಇತ್ತು. ಇದಕ್ಕೆ ಗುಜರಾತ್ ಸಾಯಿ ಸುದರ್ಶನ್ (65, 29ಎ) ಮತ್ತು ಡೇವಿಡ್ ಮಿಲ್ಲರ್ (55, 23) ಅವರ ಮಿಂಚಿನ ಅರ್ಧ ಶತಕಗಳ ನೆರವಿನಿಂದ ಹೋರಾಟ ತೋರಿತು. ಕೊನೆಯಲ್ಲಿ ರಶೀದ್ ಖಾನ್ (ಔಟಾಗದೇ 21, 11ಎ) ತೀವ್ರ ಹೋರಾಟ ನೀಡಿದರೂ ಫಲಪ್ರದವಾಗಲಿಲ್ಲ. ಅಂತಿಮ ಓವರಿನಲ್ಲಿ 19 ರನ್ ಬೇಕಿದ್ದಾಗ 14 ರನ್ಗಳನ್ನಷ್ಟೇ (ಎರಡು ಬೌಂಡರಿ, ಒಂದು ಸಿಕ್ಸರ್ ) ಬಾರಿಸಲು ಸಾಧ್ಯವಾಯಿತು.ವೃದ್ಧಿಮಾನ್ ಸಹಾ (39) ಮತ್ತು ಸಾಯಿ ಸುದರ್ಶನ್ 82 ರನ್ ಜೊತೆಯಾಟ ನೀಡಿದರು.
ಡೆಲ್ಲಿ ಪರ ಬಿರುಸಿನ ಬ್ಯಾಟಿಂಗ್ ಮಾಡಿದ ಪಂತ್ ಮೋಹಿತ್ ಶರ್ಮಾ ಅವರ ಕೊನೆಯ ಓವರ್ನಲ್ಲಿ ನಾಲ್ಕು ಸಿಕ್ಸರ್, ಒಂದು ಬೌಂಡರಿ ಸಹಿತ 31 ರನ್ ಹೊಡೆದರು. ಮೋಹಿತ್ ನಾಲ್ಕು ಓವರ್ಗಳಲ್ಲಿ 73 ರನ್ ನೀಡಿ ದುಬಾರಿಯಾದರು.