ಚೆನ್ನೈ: ಪಂಜಾಬ್ ಕಿಂಗ್ಸ್ ತಂಡವು ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಇದರೊಂದಿಗೆ ಐದು ಬಾರಿಯ ಚಾಂಪಿಯನ್ ಚೆನ್ನೈ ಪ್ಲೇಆಪ್ ಕಾಣದೆ ಕೂಟದಿಂದಲೇ ನಿರ್ಗಮಿಸಿದೆ. ಪ್ರಸಕ್ತ ಸಾಲಿನಲ್ಲಿ ಚೆಪಾಕ್ ಮೈದಾನದಲ್ಲಿ ಚೆನ್ನೈ ಐದನೇ ಸೋಲು ಕಂಡಿದೆ. ಇದು ಆವೃತ್ತಿಯೊಂದರಲ್ಲಿ
ತವರಿನ ಅಂಗಳದಲ್ಲಿ ಚೆನ್ನೈನ ಕಳಪೆ ಸಾಧನೆಯಾಗಿದೆ. ಅಲ್ಲದೆ ಐಪಿಎಲ್ 2025ರಲ್ಲಿ ತವರಿನ ಅಂಗಳದಲ್ಲಿ ಸತತ ಐದನೇ ಸೋಲು ಕಂಡಿದೆ.ಇದೇ ಮೊದಲ ಬಾರಿಗೆ ಸತತವಾಗಿ ಎರಡನೇ ವರ್ಷವೂ ಐಪಿಎಲ್ ಪ್ಲೇ-ಆಫ್ ಪ್ರವೇಶಿಸುವಲ್ಲಿ ಚೆನ್ನೈ ವಿಫಲವಾಗಿದೆ. ಒಟ್ಟಾರೆಯಾಗಿ ಐದು ಬಾರಿದ ಚಾಂಪಿಯನ್ ಚೆನ್ನೈ, ನಾಲ್ಕನೇ ಸಲ (2020, 2022, 2024, 2025) ಪ್ಲೇ-ಆಫ್ಗೆ ಲಗ್ಗೆ ಇಡುವಲ್ಲಿ ವೈಫಲ್ಯ ಕಂಡಿದೆ.ಆಡಿರುವ 10 ಪಂದ್ಯಗಳ ಪೈಕಿ ಚೆನ್ನೈ ಕೇವಲ ಎರಡು ಜಯ ದಾಖಲಿಸಿ 4 ಅಂಕ ಪಡೆದಿದೆ.ಪ್ರಸಕ್ತ ಸಾಲಿನಲ್ಲಿ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿರುವ ಮೊದಲ ತಂಡ ಸಿಎಸ್ಕೆ.
ಈ ಗೆಲುವಿನೊಂದಿಗೆ ಆಡಿರುವ 10 ಪಂದ್ಯಗಳಲ್ಲಿ ಆರನೇ ಗೆಲುವು ದಾಖಲಿಸಿರುವ ಶ್ರೇಯಸ್ ಅಯ್ಯರ್ ಬಳಗವು, ಒಟ್ಟು 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಪಂಜಾಬ್ನ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.