ಬೆಳಗಾವಿ:ಸುಳ್ಯ ತಾಲೂಕಿಗೆ ಕಾಫಿ ಬೋರ್ಡ್ ಹಾಗೂ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ಅಧಿಕಾರಿಗಳು ಕಾಫಿ ಬೆಳೆಗಾರರ ತೋಟ ಪರಿಶೀಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಪರಿಶೀಲನಾ ವರದಿಯ ವಿವರ ಏನು ಎಂದು ಬೆಳಗಾವಿ ಅಧಿವೇಶನದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
‘ಸುಳ್ಯ ತಾಲೂಕಿಗೆ ಕಾಫಿ ಬೋರ್ಡ್ ಹಾಗೂ
ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ಅಧಿಕಾರಿಗಳು ಕಳೆದ ಅಕ್ಟೋಬರ್ ತಿಂಗಳ 8 ಮತ್ತು 9ರಂದು ಕಾಫಿ ಬೆಳೆಗಾರರ ತೋಟಗಳನ್ನು ಪರಿಶೀಲಿಸಿರುತ್ತಾರೆ. ಪ್ರಸ್ತುತ, ಈ ಪ್ರದೇಶಗಳಲ್ಲಿ ಕಾಫಿ ಬೆಳೆಯುತ್ತಿರುವ ರೈತರು ಯಾವುದೇ ಸುಧಾರಿತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿರುವುದಿಲ್ಲ ಮತ್ತು ಕಾಫಿಯನ್ನು ಅಡಿಕೆ ಜೊತೆಗೆ ಹೆಚ್ಚುವರಿ ಆದಾಯದ ಮೂಲವಾಗಿ ಬೆಳೆಯಲಾಗುತ್ತಿದೆ. ಆದಾಗ್ಯೂ, ಬೆಳೆಯುತ್ತಿರುವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟು, ಪೊದೆ ನಿರ್ವಹಣೆ, ನೀರಾವರಿ ನಿರ್ವಹಣೆ ಮತ್ತು ಪೋಷಕಾಂಶಗಳ ನಿರ್ವಹಣೆ, ಸೂಕ್ತ ಕೃಷಿ-ಅರಣ್ಯ ಮರಗಳ ನಿರ್ವಹಣೆ ಮಾಡಿ ಕಾಫಿಯ ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸಬಹುದಾಗಿರುತ್ತದೆ.
ಸಾಕಷ್ಟು ನೆರಳು, ನೀರಿನ ಮೂಲ, ಸಮಂಜಸವಾದ ಪೋಷಕಾಂಶ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಂಡ ಎಸ್ಟೇಟ್ ಗಳಲ್ಲಿಯೂ ಗಿಡಗಳು ಉತ್ತಮವಾಗಿದ್ದು, ಇಳುವರಿ ಮಟ್ಟವು ಮಧ್ಯಮವಾಗಿದೆ ಹಾಗೂ ಸಾಂಪ್ರದಾಯಿಕ ಪ್ರದೇಶಗಳ ತೋಟಗಳಿಗೆ ಸಮನಾಗಿರುವುದಿಲ್ಲ.
ಸಾಂಪ್ರದಾಯಿಕ ಪ್ರದೇಶಗಳಿಗೆ ಸಮಾನವಾಗಿ ಅಪೇಕ್ಷಿತ ಗುಣಮಟ್ಟದೊಂದಿಗೆ ಲಾಭದಾಯಕ ಕಾಫಿ ಇಳುವರಿಯನ್ನು ಪಡೆಯುವುದು ಈ ಎಲ್ಲಾ ಕ್ಷೇತ್ರಗಳಲ್ಲಿ ಸವಾಲಾಗಿರುತ್ತದೆ.
ಅಡಿಕೆ ತೋಟಗಳಲ್ಲಿ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕೆ ರೋಗಗಳ ಬಾಧೆ ಅನೇಕ ವರ್ಷಗಳಿಂದ ಇರುವುದರಿಂದ, ಸದರಿ ತೋಟಗಳಲ್ಲಿ ಕಾಫಿಯನ್ನು ಆರ್ಥಿಕ ಬೆಳೆಯಾಗಿ ಉತ್ತೇಜಿಸಲು ನೆರಳಿಗಾಗಿ ಅಗ್ರೋ ಫಾರೆಸ್ಟ್ ಮರಗಳನ್ನು ಪರಿಚಯಿಸುವ ಮೂಲಕ ಅಗತ್ಯವಾದ ಸೂಕ್ಷ್ಮ ವಾತಾವರಣವನ್ನು ಸೃಷ್ಟಿಸುವುದು ಅವಶ್ಯಕವಾಗಿದೆ.ಈ ವಲಯಗಳಲ್ಲಿನ ಕಾಫಿಯ ಇಳುವರಿ ಮೇಲೆ ಎತ್ತರದ ಪ್ರದೇಶ, ಹೂ ಬಿಡುವ ನಿರ್ಣಾಯಕ ತಿಂಗಳುಗಳಲ್ಲಿ (ಮಾರ್ಚ್ ಏಪ್ರಿಲ್)ಅಧಿಕ ತಾಪಮಾನ, ಕಡಿಮೆ ಮಳೆ ಮತ್ತು ತಿಂಗಳುಗಳಲ್ಲಿ ಭಾರೀ ಮಳೆಯು ಪರಿಣಾಮ ಬೀರುತ್ತದೆ.ಸ್ಥಿರವಾದ ಇಳುವರಿ, ಗುಣಮಟ್ಟ ಮತ್ತು ಬೆಳೆಯನ್ನು ಅನೇಕ ವರ್ಷಗಳವರೆಗೆ ಉಳಿಸಿಕೊಳ್ಳಲು ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ವರದಿಯಲ್ಲಿ ತಿಳಿಸಿದೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕಾಫಿ ಬೆಳೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ, ಕಾಫಿ ಮತ್ತು ತಾಳೆ ಸಸಿಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ಇರುವ ಮಾನದಂಡಗಳ ಬಗ್ಗೆ ಶಾಸಕರು ಪ್ರಶ್ನೆ ಸದನದಲ್ಲಿ ಎತ್ತಿದ್ದಾರೆ.