ಸುಳ್ಯ:ಪೇರಾಲು ಶ್ರೀ ಬಜಪ್ಪಿಲ ಇರುವೆರ್ ಉಳ್ಳಾಕುಲು, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಡಿ.21 ಮತ್ತು 22 ರಂದು ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀಕ್ಷೇತ್ರ ಬಜಪ್ಪಿಲದ ಆನುವಂಶಿಕ ಆಡಳಿತ ಮೊಕ್ತೇಸರರಾದ ಹೇಮಂತಕುಮಾರ್ ಗೌಡರಮನೆ ಮಾತನಾಡಿ ಸುಮಾರು ಸಾವಿರ ವರ್ಷದ ಇತಿಹಾಸ ಇರುವ ಪೇರಾಲು ಶ್ರೀ ಬಜಪ್ಪಿಲ ಇರುವರ್ ಉಳ್ಳಾಕುಲು, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ
ಚಾವಡಿಯು ಸಂಪೂರ್ಣ ಜೀರ್ಣೋದ್ಧಾರಗೊಂಡು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗಿದೆ.ಸುಮಾರು ಒಂದು ಕೋಟಿಗೂ ಹೆಚ್ಚು ಮೊತ್ತದಲ್ಲಿ ಕ್ಷೇತ್ರ ಜೀರ್ಣದ್ಧಾರಗೊಂಡಿದೆ. ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಹಾಗೂ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಡಿ.21 ಶನಿವಾರ ಮತ್ತು ಡಿ.22 ಭಾನುವಾರ ನಡೆಯಲಿದೆ ಎಂದು ತಿಳಿಸಿದರು. ಡಿ.21ರಂದು ಬೆಳಿಗ್ಗೆ ಗಂಟೆ 9 ರಿಂದ ವಾದ್ಯ ಘೋಷಗಳೊಂದಿಗೆ ಹಸಿರುವಾಣಿ ಮೆರವಣಿಗೆ
ಶ್ರೀರಾಮ ಭಜನಾ ಮಂದಿರ ಪೇರಾಲು-ಅಂಬ್ರೋಟಿ ಇಲ್ಲಿಂದ ಹೊರಡಲಿದೆ. 11 ಗಂಟೆಗೆ ದೇವತಾ ಪ್ರಾರ್ಥನೆಯೊಂದಿಗೆ ಉಗ್ರಾಣ ತುಂಬಿಸುವುದು. ಮಧ್ಯಾಹ್ನ ಗಂಟೆ 1-00ರಿಂದ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಗಂಟೆ 3-30ಕ್ಕೆ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ 6 ಗಂಟೆಗೆ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. 6.30ರಿಂದ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತು ಬಲಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪುಣ್ಯಾಹಾಂತ ನಡೆಯಲಿದೆ.
ಡಿ.22ರಂದು ಆದಿತ್ಯವಾರ ಪೂರ್ವಾಹ್ನ ಗಂಟೆ 8-00ರಿಂದ ಗಣಪತಿಹೋಮ, ಬ್ರಹ್ಮಕಲಶಪೂಜೆ ನಡೆದು ಹಗಲು 10-23ರ ಕುಂಭ ಲಗ್ನ ಸುಮೂಹೂರ್ತದಲ್ಲಿ ಶ್ರೀ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ,
ಮಹಾಪೂಜೆ, ನಿತ್ಯನೈಮಿತ್ಯಾದಿಗಳ ನಿರ್ಣಯ,ಪ್ರಸಾದ ವಿತರಣೆ ನಡೆಯಲಿದೆ.ಮಧ್ಯಾಹ್ನ ಗಂಟೆ 1ರಿಂದ ಅನ್ನ ಸಂತರ್ಪಣೆ ನಡೆಯಲಿದೆ ಎಂದು ವಿವರಿಸಿದರು.21 ಮತ್ತು 22 ರಂದು ಹಗಲು ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ:
ಡಿ.21ರಂದು ಸಂಜೆ ಗಂಟೆ 7-00ರಿಂದ ನಡೆಯುವ
ಸಭಾ ಕಾರ್ಯಕ್ರಮದ ಉದ್ಘಾಟನೆ ಮತ್ತು ಆಶೀರ್ವಚನವನ್ನು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಗಳು ನೆರವೇರಿಸುವರು. ಪೇರಾಲು ಶ್ರೀ ಬಜಪ್ಪಿಲ ಕ್ಷೇತ್ರದ ಅನುವಂಶಿಕ ಆಡಳಿತ ಮೊಕೇಸರರಾದ ಹೇಮಂತ್ಕುಮಾರ್ ಗೌಡರಮನೆ ಅಧ್ಯಕ್ಷತೆ ವಹಿಸುವರು.ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ಧಾರ್ಮಿಕ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ ಗೌಡ, ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸಸರ ಡಾ.ಹರಪ್ರಸಾದ್ ತುದಿಯಡ್ಕ, ತೊಡಿಕಾನ
ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಮೇನಾಲ ಉಳ್ಳಾಕುಲು ದೈವಸ್ಥಾನದ ಮೊಕ್ತೇಸರ ಗುಡ್ಡಪ್ಪ ರೈ ಮೇನಾಲ , ಶ್ರೀಪಾದ ಕನ್ಸಲ್ಟೆನ್ಸಿಸಿವಿಲ್ ಇಂಜಿನಿಯರ್ ಶ್ಯಾಮ್ ಪ್ರಸಾದ್ ಅಡ್ಡಂತಡ್ಕ ಭಾಗವಹಿಸುವರು. ಪೇರಾಲು ಶ್ರೀ ಬಜಪಿಲ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು ಉಪಸ್ಥಿತರಿರುವರು.

ಡಿ.22 ರಂದು ಸಂಜೆ 6 ರಿಂದ ನಡೆಯುವ
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಬಜಪ್ಪಿಲದ
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಬಾಳೆಕೋಡಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಕಮಿಟಿ ಬಿ ಇದರ ಚೆಯರ್ಮೆನ್ ಡಾ. ಕೆ. ವಿ. ರೇಣುಕಾಪ್ರಸಾದ್,
ಅಜ್ಜಾವರ ಕರ್ಲಪ್ಪಾಡಿ ಶ್ರೀ ಶಾಸ್ತ್ರವೇಶ್ವರ ದೇವಸ್ಥಾನ , ಮೊಕೇಸರ ಮುದ್ದಪ್ಪ ಗೌಡ ಕುಡೆಂಬಿ, ಕರ್ಲಪ್ಪಾಡಿ, ಅಜ್ಜಾವರ ಶ್ರೀ ಮಹಿಷಮರ್ಧಿನೀ ದೇವಸ್ಥಾನದ ಧರ್ಮದರ್ಶಿ ಬಯಂಬು ಭಾಸ್ಕರ ರಾವ್, ಕಾನತ್ತಿಲ ಶ್ರೀ ಉಳ್ಳಾಕುಲು ದೈವಸ್ಥಾನದ ಮೊಕ್ತೇಸರ ಹೇಮನಾಥ್ ಕೆ. ವಿ, ಅಂಬ್ರೋಟಿ ಹದಿನಾರು ಊರ ಗೌಡ ಲಕ್ಷ್ಮಣ ಗೌಡ ಕುಕ್ಕೇಟಿ, ಅತ್ಯಾಡಿ ಶ್ರೀ ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲೋಕಯ್ಯ ಮಾಸ್ತರ್, ನಾರಾಲು ಶ್ರೀ ಉಳ್ಳಾಕುಲು ಚಾವಡಿಯ ಮೋನಪ್ಪ ಗೌಡ ನಾರಾಲು,ಮುಳ್ಯ ಹತ್ತೊಕ್ಕುಲು ಮುಖ್ಯಸ್ಥ ಹೊನ್ನಪ್ಪ ಗೌಡ ದೊಡ್ಡಮನೆ, ಕುಕ್ಕಂದೂರು ಶ್ರೀ ಕಿನ್ನಿಮಾನಿ ಪೂಮಾನಿ ದೈವಸ್ಥಾನದ ಮೊಕ್ತೇಸರ ಎನ್. ಎಸ್. ಬಾಲಕೃಷ್ಣ ಗೌಡ ನಡುಬೆಟ್ಟು, ಸುಳ್ಯ ಪನ್ನೆಬೀಡು ಶ್ರೀ ಭಗವತೀ ಕ್ಷೇತ್ರದ ಬಲ್ಲಾಳರ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ, ಸುಳ್ಯ ಶ್ರೀ ಕಲ್ಕುಡ ದೈವಸ್ಥಾನದ ಅಧ್ಯಕ್ಷ ಉಮೇಶ್ ಪಿ. ಕೆ, ಶ್ರೀ ಕ್ಷೇತ್ರ ಬಜಪ್ಪಿಲದ ಆಡಳಿತ ಸಮಿತಿ ಕಾರ್ಯದರ್ಶಿ ಪ್ರವೀಣ್ ಬಾಳೆಕೋಡಿ ಭಾಗವಹಿಸಲಿದ್ದಾರೆ.
ರಾತ್ರಿ ಗಂಟೆ 8-30ರಿಂದ ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು:
ಡಿ.21ರಂದು ಸಂಜೆ 4ರಿಂದ ಸ್ಥಳೀಯರಿಂದ ಸಾಂಸ್ಕೃತಿಕ ಸೌರಭ ರಾತ್ರಿ ಗಂಟೆ 9ರಿಂದ ಡ್ಯಾನ್ಸ್ ಬೀಟ್ಸ್ ಜೀವನ್ ಟಿ. ಎನ್. ಬೆಳ್ಳಾರೆ ಇವರ ನಿರ್ದೇಶನ ತಂಡದಿಂದ ‘ನೃತ್ಯ ಸಂಭ್ರಮ, ಡಿ.22ರಂದು ಸಂಜೆ 4ರಿಂದ ಸ್ಥಳೀಯರಿಂದ ಸಾಂಸ್ಕೃತಿಕ ಸೌರಭ, ರಾತ್ರಿ 9ರಿಂದ ತುಳು ಹಾಸ್ಯಮಯ ನಾಟಕ ಅಮ್ಮೆರ್ ಪ್ರದರ್ಶನಗೊಳ್ಳಲಿದೆ.
ನೇಮೋತ್ಸವ:
ಡಿ.26 ರಂದು ಉಳ್ಳಾಕುಲು ದೈವಗಳ ನೇಮೋತ್ಸವ, ಡಿ.27ರಂದು ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕಾಲಾವಧಿ ನೇಮೋತ್ಸವ ನಡೆಯಲಿದೆ ಎಂದು ಹೇಮಂತಕುಮಾರ್ ಗೌಡರಮನೆ ತಿಳಿಸಿದ್ದಾರೆ.
ಪ್ರತೀ ಮನೆಗಳಿಗೂ ಶೃಂಗಾರ, ಎರಡು ದಿನ ನಂದಾದೀಪ:
ಬ್ರಹ್ಮಕಲಶೋತ್ಸವ ನಡೆಯುವ ಎರಡೂ ದಿನಗಳ ಕೂಡಾ ಬಜಪ್ಪಿಲ ಕ್ಷೇತ್ರ ವ್ಯಾಪ್ತಿಯ ಪ್ರತೀ ಮನೆಯಲ್ಲಿಯೂ ನಂದಾ ದೀಪ ಉರಿಸಲಾಗುತ್ತದೆ. ಹಾಗೂ ಮನೆಯನ್ನು ಅವರವರೇ ಸ್ವಚ್ಛವಾಗಿ ಮಾಡಿ, ಶೃಂಗಾರಗೊಳಿಸಲಿದ್ದಾರೆ. ಊರಿನ ದೈವಸ್ಥಾನಗಳನ್ನು ಶೃಂಗರಿಸಲಾಗುವುದು ಎಂದು ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು ಮಾಹಿತಿ ನೀಡಿದರು.
ಎರಡು ದಿನದ ಕಾರ್ಯಕ್ರಮಕ್ಕೆ ಭಕ್ತರು ಆಗಮಿಸುವುದರಿಂದ ಬಜಪ್ಪಿಲ ಕ್ಷೇತ್ರದ ಪಕ್ಕದಲ್ಲೇ ಸಾಖಷ್ಟು ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಆದ್ದರಿಂದ ಬರುವವರೆಲ್ಲರಿಗೂ ಪೇರಾಲು ಶಾಲೆಯ ವಠಾರ ಹಾಗೂ ದೈವಸ್ಥಾನದ ಇನ್ನೊಂದು ಕಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಮತ್ತು ಈ ಎರಡೂ ಕಡೆಗಳಲ್ಲಿಯೂ ಬಜಪ್ಪಿಲ ಕ್ಷೇತ್ರದ ವಾಹನಗಳಿದ್ದು ಆ ವಾಹನಗಳ ಮೂಲಕ ಭಕ್ತರನ್ನು ಕ್ಷೇತ್ರಕ್ಕೆ ಕರೆದುಕೊಂಡು ಹೋಗಿ ವಾಪಸು ಕರೆತಂದು ಅವರ ವಾಃನದ ಪಕ್ಕದಲ್ಲಿ ಬಿಡುವ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗಿದೆ ಎಂದವರು ವಿವರ ನೀಡಿದರು
ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಬಾಳೆಕೋಡಿ, ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು, ಸಂಚಾಲಕರಾದ ಜಯರಾಮ ಗೌಡರಮನೆ
ಕೋಶಾಧಿಕಾರಿ ತೀರ್ಥೆಶ್ ಬಲಂದೋಟಿ, ಆಡಳಿತ ಸಮಿತಿ ಕಾರ್ಯದರ್ಶಿ ಪ್ರವೀಣ್ ಕುಮಾರ್ ಬಾಳೆಕೋಡಿ, ಜೀರ್ಣೋದ್ಧಾರ ಸಮಿತಿ
ಕಾರ್ಯದರ್ಶಿಗಳಾದ, ಮಂಜುನಾಥ ಪಿ. ಪೇರಾಲು, ದಾಮೋದರ ಮಿತ್ತಪೇರಾಲು, ರಾಜಣ್ಣ ಪೇರಾಲುಮೂಲೆ ಉಪಸ್ಥಿತರಿದ್ದರು.