ಮಡಿಕೇರಿ:ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿ ಇದೇ ಡಿಸೆಂಬರ್, 15 ಕ್ಕೆ 14 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಇದೇ ಡಿಸೆಂಬರ್, 15 ರಂದು ಕೊಡಗು, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ‘ಅರೆಭಾಷೆ ದಿನಾಚರಣೆ’ ಕಾರ್ಯಕ್ರಮಗಳು ಜರುಗಲಿವೆ ಎಂದು ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ತಿಳಿಸಿದ್ದಾರೆ.ಕೊಡಗು ಜಿಲ್ಲೆಯಲ್ಲಿ ಕುಶಾಲನಗರ ಪಟ್ಟಣ ಮತ್ತು ಐಗೂರು ಗ್ರಾಮ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ಹಾಗೂ ಬೆಳ್ತಂಗಡಿ, ಹಾಗು
ಮೈಸೂರಿನ ಕೊಡಗು ಗೌಡ ಸಮಾಜದಲ್ಲಿ ಅರೆಭಾಷೆ ದಿನಾಚರಣೆ ನಡೆಯಲಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಹೇಳಿದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಔನ್ನತ್ಯಕ್ಕೆ ಕೊಂಡೊಯ್ಯುವಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ ಅರೆಭಾಷೆಯಲ್ಲಿ ಪುಸ್ತಕ ಪ್ರಕಟಣೆ, ಸಾಹಿತ್ಯ ಮತ್ತು ಸಂಸ್ಕೃತಿ ಕಾರ್ಯಕ್ರಮ ಹಾಗೂ ಅರೆಭಾಷೆ ಬರವಣಿಗೆಗೆ ಹೆಚ್ಚು ಒತ್ತು ನೀಡುವುದು. ಜೊತೆಗೆ ಸಂಶೋಧನೆಗೆ ಗಮನಹರಿಸುವಲ್ಲಿ ಅಕಾಡೆಮಿ ಕಾರ್ಯಪ್ರವೃತ್ತವಾಗಿದೆ ಎಂದು ಸದಾನಂದ ಮಾವಜಿ ಅವರು ತಿಳಿಸಿದ್ದಾರೆ.
ಅರೆಭಾಷೆ ಗಡಿ ಉತ್ಸವ ಕಾರ್ಯಕ್ರಮವನ್ನು ಈಗಾಗಲೇ ಕಾಸರಗೋಡಿನ ಬಂದ್ಯಡ್ಕ, ಸುಳ್ಯ ತಾಲ್ಲೂಕಿನ ಮಂಡೆಕೋಲು ಹಾಗೂ ಕೊಡಗು ಜಿಲ್ಲೆಯ ಚೆಯ್ಯಂಡಾಣೆ ಗ್ರಾಮದಲ್ಲಿ ಆಯೋಜಿಸಿ, ಗ್ರಾಮೀಣ ಪ್ರದೇಶದಲ್ಲಿ ಅರೆಭಾಷೆ ಬೆಳವಣಿಗೆಗೆ ಶ್ರಮಿಸುತ್ತಿರುವುದು ವಿಶೇಷವಾಗಿದೆ.
ಡಿ.15 ರಂದು ಸುಳ್ಯದಲ್ಲಿ ಅರೆಭಾಷೆ ದಿನಾಚರಣೆ: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯ ಗೌಡರ ಯುವ ಸೇವಾ ಸಂಘ, ಮಹಿಳಾ ಘಟಕ, ತರುಣ ಘಟಕ, ನಗರ ಸಮಿತಿ ಮತ್ತು ನಗರ ಮಹಿಳಾ ಸಮಿತಿ ಇವರ ಸಹಯೋಗದಲ್ಲಿ ಅರೆಭಾಷೆ ದಿನಾಚರಣೆಯು ಡಿಸೆಂಬರ್, 15 ರಂದು ಬೆಳಗ್ಗೆ 9.30 ಗಂಟೆಗೆ ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಹಿರಿಯ ಎಂಜಿನಿಯರ್ ಡಿ.ಎಂ.ಸುಮಿತ್ರ, ಸಾಹಿತಿ ಶೈಲಜಾ ದಿನೇಶ್, ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷರಾದ ಕೆ.ಸಿ.ಸದಾನಂದ ಕುರುಂಜಿ, ಮೋಹನ್ ರಾಮ್ ಸುಳ್ಳಿ, ನಿವೃತ್ತ ಅರಣ್ಯ ಪಾಲಕರಾದ ಅಮೈ ಸುಂದರ ಗೌಡ ಇತರರು ಪಾಲ್ಗೊಳ್ಳಲಿದ್ದಾರೆ.