*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಕಳೆದ ವರ್ಷ ದಾಖಲೆಯ ಧಾರಣೆ ಏರಿ ಚಿನ್ನದ ಬೆಳೆಯಾಗಿದ್ದ ಕೊಕ್ಕೊಗೆ ಈ ಬಾರಿ ಬೆಲೆಯೂ ಕುಸಿತವಾಗಿದೆ, ಇಳುವರಿಯೂ ಕಡಿಮೆಯಾಗಿದ್ದು ಅನಿರೀಕ್ಷಿತ ಹೊಡೆತ ಬಿದ್ದಿದೆ. ಕಳೆದ ವರ್ಷ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಕೊಕ್ಕೋ ಈ ಬಾರಿ ಅಷ್ಟಾಗಿ ಶೈನ್ ಆಗುತ್ತಿಲ್ಲ ಎಂದು ಕೃಷಿಕರು ಹೇಳುತ್ತಾರೆ. ಕಳೆದ ವರ್ಷ ರೂ.300ರ ಗಡಿ ದಾಟಿದ್ದ ಕೊಕ್ಕೊ ದರ 330 ರೂ ದಾಖಲಾಗಿತ್ತು. ಬಳಿಕ ದರ ಕುಸಿದು ಒಂದೊಮ್ಮೆ ನೂರರ ಆಸು ಪಾಸಿಗೆ ಬಂದಿದ್ದರೂ, ಬೆಲೆಯಲ್ಲಿ ಚೇತರಿಕೆ ಕಂಡು ಕೆಜಿಗೆ 200, 220ರವರೆಗೆ ಏರಿತ್ತು. ಪ್ರಸ್ತುತ ಕೆಜಿ ದರ 150ರ ಆಸುಪಾಸಿನಲ್ಲಿದೆ. ಆದರೆ

ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಕೊಕ್ಕೊ ವ್ಯಾಪಾರ ಕುಸಿತವಾಗಿದೆ. ಕೊಕ್ಕೊ ಖರೀದಿ ಕಡಿಮೆಯಾಗಿದೆ ಎಂದು ಕೃಷಿಕರು ಹಾಗೂ ವ್ಯಾಪಾರಿಗಳು ಹೇಳುತ್ತಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಕೊಕ್ಕೊ ಇಳುವರಿಯೂ ಈ ಬಾರಿ ಕಡಿಮೆಯಾಗಿದೆ.
ಕಳೆದ ಮಳೆಗಾಲದಲ್ಲಿ ಸುರಿದ ವಿಪರೀತ ಮಳೆ ತೀವ್ರ ಹೊಡೆತ ನೀಡಿದೆ. ಜುಲೈ, ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಬಹುತೇಕ ಕಡೆಗಳಲ್ಲಿ ಕೊಕ್ಕೊ ಕಾಯಿ ಕರಟಿ ಹೋಗಿ ಕಪ್ಪು ಬಣ್ಣಕ್ಕೆ ತಿರುಗಿ ನಾಶವಾಗಿದೆ. ಇದರಿಂದ ಸಾಮಾನ್ಯವಾಗಿ ಉತ್ತಮ ಕೊಕ್ಕೊ ಫಸಲು ಲಭಿಸುತ್ತಿದ್ದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಫಸಲು ಕಡಿಮೆಯಾಗಿತ್ತು. ಹವಾಮಾನ ವೈಪರೀತ್ಯದಿಂದ ಜನವರಿ-ಮಾರ್ಚ್ ಅವಧಿಯಲ್ಲಿಯೂ ನಿರೀಕ್ಷಿತ ಫಸಲು ಲಭಿಸಿಲ್ಲ. ಒಟ್ಟಿನಲ್ಲಿ ಅಕ್ಟೋಬರ್ನಿಂದ ಮಾರ್ಚ್ ಅವಧಿಯಲ್ಲಿ ಇಳುವರಿ ಕಡಿಮೆಯಾಗಿದೆ. ಕಳೆದ ಬಾರಿಯ ತೀವ್ರ ಮಳೆಯ ಪರಿಣಾಮ ಕೊಕ್ಕೊ ಕೈಕೊಟ್ಟಿದೆ. ಕೊಕ್ಕೊ ಮಿಡಿ ಕಾಯಿಗಳು ಸಂಪೂರ್ಣ ನಾಶವಾಗಿ ಹೋಗಿತ್ತು. ಸಾಮಾನ್ಯ ಬೆಳೆದ ಕೊಕ್ಕೊ ಕಾಯಿಗಳು ಕೂಡ ಕೊಳೆತು ಹೋಗಿದೆ. ಕಪ್ಪು ಬಣ್ಣಕ್ಕೆ ತಿರುಗಿ ಕರಟಿ ನಿಂತಿತ್ತು. ಇದರಿಂದ ಹಲವು ಕೃಷಿಕರಿಗೆ ಅರ್ಧದಷ್ಟು ಫಸಲು ಕಡಿಮೆಯಾಗಿದೆ. ಕೊಕ್ಕೊದ ಪ್ರಮುಖ ಸೀಸನ್ ಆದ ಏಪ್ರಿಲ್- ಜುಲೈ ಅವಧಿಯಲ್ಲಿ ಉತ್ತಮ ಫಸಲು, ಸ್ಥಿರ ಮಾರುಕಟ್ಟೆ ದೊರೆಯಬಹುದು ಎಂಬುದು ಇದೀಗ ಕೃಷಿಕರ ನಿರೀಕ್ಷೆ.ಕೃಷಿಕರಿಗೆ ದಿನ ನಿತ್ಯ ಆದಾಯ ಕೊಡುವ ಮುಖ್ಯ ಮಿಶ್ರ ಬೆಳೆ ಕೊಕ್ಕೊ.ಅಡಿಕೆ ತೋಟಗಳಲ್ಲಿ ಕೊಕ್ಕೊ ಮರಗಳು ಅಡಿಕೆ ಮರಗಳ ಜೊತೆ

ಗಳಸ್ಯ ಕಂಠಸ್ಯವಾಗಿ ಬೆಳೆಯುತ್ತದೆ. ತಲ ತಲಾಂತರಗಳಿಂದ ಅಡಿಕೆ ಜೊತೆಗಿನ ಮಿಶ್ರ ಬೆಳೆ ಕೊಕ್ಕೊ. ವರ್ಷದಲ್ಲಿ 8-9 ತಿಂಗಳ ಕಾಲ ನಿರಂತರ ಫಸಲು ಕೊಡುವ ಬೆಳೆ ಕೊಕ್ಕೊ. ಆದರೆ ಕಳೆದ ಹಲವು ವರ್ಷಗಳಿಂದ ಕೊಕ್ಕೊ ದರ ಕೆಜಿಗೆ 50-60ರೂ ಆಸುಪಾಸಿನಲ್ಲಿಯೇ ಗಿರಕಿ ಹೊಡೆಯುತ್ತಿತ್ತು. ಇದರಿಂದ ಕೊಕ್ಕೊ ಕೃಷಿ ಲಾಭದಾಯಕವಾಗಿಲ್ಲ ಎಂದು ಕೃಷಿಕರು ನಿಧಾನಕ್ಕೆ ಕೊಕ್ಕೊ ಕೃಷಿಯಿಂದ ವಿಮುಖರಾಗ ತೊಡಗಿದರು. ಇದರಿಂದ ಕೊಕ್ಕೊ ಇಳುವರಿಯೂ ಕಡಿಮೆಯಾಯಿತು.
ಆದರೆ ಕಳೆದ ವರ್ಷ ಉತ್ತಮ ದರ ಬಂದ ಕಾರಣ ಕೃಷಿಕರಲ್ಲಿ ಕೊಕ್ಕೊ ಬೆಳೆ ಕುರಿತು ಮತ್ತೆ ಆಸಕ್ತಿ ಚಿಗುರಿತು. ಇದರಿಂದ ಹಲವು
ಮಂದಿ ಕೃಷಿಕರು ಹೊಸತಾಗಿ ಕೊಕ್ಕೊ ಕೃಷಿ ಆರಂಭಿಸಿದ್ದಾರೆ.
ಕಳೆದ ಮಳೆಗಾಲದಲ್ಲಿ ಕೊಕ್ಕೊ ಗಿಡಗಳಿಗೆ ಭಾರೀ ಬೇಡಿಕೆ ಇತ್ತು.
ಉತ್ತಮ ಮಿಶ್ರ ಬೆಳೆಯಾದರೂ ಹಲವು ಸಮಸ್ಯೆಗಳು ಕೊಕ್ಕೊ ಬೆಳೆಯನ್ನು ಕಾಡುತ್ತಾ ಇರುತ್ತದೆ. ಮಳೆ ಅಧಿಕ ಆದರೆ ಕೊಕ್ಕೊ ಕಾಯಿ ಕರಗುವುದು, ಮಂಗ, ಅಳಿಲು, ಕಬ್ಬೆಕ್ಕು ಮತ್ತಿತರ ಪ್ರಾಣಿಗಳ ಉಪಟಳದಿಂದ ಕೊಕ್ಕೊ ಫಸಲು ಕಡಿಮೆಯಾಗಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲಾ ಎಂಬ ಸ್ಥಿತಿ ಕೃಷಿಕರದ್ದು.
‘ಕೊಕ್ಕೊಗೆ ಈ ವರ್ಷವೂ ಉತ್ತಮ ದರ ಇದ್ದರೂ ಫಸಲು ಕಡಿಮೆಯಾಗಿದೆ. ಕಳೆದ ವರ್ಷಕ್ಕಿಂದ ಕೊಕ್ಕೊ ಕೃಷಿ ಅರ್ಧದಷ್ಟು ಕಡಿಮೆ ಆಗಿದೆ ಎನ್ನುತ್ತಾರೆ ಕೃಷಿಕರಾದ ಜಯಪ್ರಕಾಶ್ ಕುಕ್ಕೇಟಿ.