ಸುಳ್ಯ:ಕಳೆದ ಬೇಸಿಗೆಯಲ್ಲಿ ದಾಖಲೆಯ ಧಾರಣೆ ಏರಿ ಚಿನ್ನದ ಬೆಳೆಯಾಗಿದ್ದ ಕೊಕ್ಕೊಗೆ ಈ ಮಳೆಗಾಲದಲ್ಲಿ ಸುರಿದ ವಿಪರೀತ ಮಳೆ ತೀವ್ರ ಹೊಡೆತ ನೀಡಿದೆ. ಜುಲೈ, ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಬಹುತೇಕ ಕಡೆಗಳಲ್ಲಿ ಕೊಕ್ಕೊ ಕಾಯಿ ಕರಟಿ ಹೋಗಿ ಕಪ್ಪು ಬಣ್ಣಕ್ಕೆ ತಿರುಗಿ ನಾಶವಾಗಿದೆ.ಇದರಿಂದ ಸಾಮಾನ್ಯವಾಗಿ ಉತ್ತಮ ಕೊಕ್ಕೊ ಫಸಲು ಲಭಿಸುತ್ತಿದ್ದ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಈ ಬಾರಿ ಕೃಷಿಕರಿಗೆ
ಫಸಲೇ ಇಲ್ಲದ ಸ್ಥಿತಿ. ಕೃಷಿಕರಿಗೆ ದಿನ ನಿತ್ಯ ಆದಾಯ ಕೊಡುವ ಮುಖ್ಯ ಮಿಶ್ರ ಬೆಳೆ ಕೊಕ್ಕೊ.ಅಡಿಕೆ ತೋಟಗಳಲ್ಲಿ ಕೊಕ್ಕೊ ಮರಗಳು ಅಡಿಕೆ ಮರಗಳ ಜೊತೆ ಗಳಸ್ಯ ಕಂಠಸ್ಯವಾಗಿ ಬೆಳೆಯುತ್ತದೆ. ತಲ ತಲಾಂತರಗಳಿಂದ ಅಡಿಕೆ ಜೊತೆಗಿನ ಮಿಶ್ರ ಬೆಳೆ ಕೊಕ್ಕೊ.
ಆಗಸ್ಟ್ ತಿಂಗಳಲ್ಲಿ ಮಳೆಗಾಲದಲ್ಲಿಯೂ ಕೊಕ್ಕೊ ಸಾಮಾನ್ಯ ಫಸಲು ಬರುತ್ತಿತ್ತು. ಆದರೆ ತೀವ್ರ ಮಳೆಯ ಪರಿಣಾಮ ಈ ಬಾರಿ ಕೊಕ್ಕೊ ಕೈಕೊಟ್ಟಿದೆ. ಕೊಕ್ಕೊ ಮಿಡಿ ಕಾಯಿಗಳು ಸಂಪೂರ್ಣ ನಾಶವಾಗಿ ಹೋಗಿದೆ. ಸಾಮಾನ್ಯ ಬೆಳೆದ ಕೊಕ್ಕೊ ಕಾಯಿಗಳು ಕೂಡ ಕೊಳೆತು ಹೋಗಿದೆ. ಕಪ್ಪು ಬಣ್ಣಕ್ಕೆ ತಿರುಗಿ ಕರಟಿ ನಿಂತಿದೆ. ಹಲವು ತೋಟಗಳಲ್ಲಿ ಕೊಕ್ಕೋ ಮರದಲ್ಲಿ ಕರಟಿದ ಕಪ್ಪು ಕಾಯಿಗಳೇ ಕಾಣುತ್ತದೆ.
ಕೊಕ್ಕೊ ದರವೂ ಕುಸಿದಿದೆ.ಕಳೆದ ಬೇಸಿಗೆಯಲ್ಲಿ ಅಂದರೆ ಫೆಬ್ರುವರಿ,ಮಾರ್ಚ್ ತಿಂಗಳಲ್ಲಿ ಕೆಜಿಗೆ 330 ರೂವರೆಗೆ ಇದ್ದ ಕೊಕ್ಕೊ ದರ ಈಗ 90-95ಕ್ಕೆ ಕುಸಿದಿದೆ. 300, 330 ರಿಂದ ಕಡಿಮೆಯಾಗುತ್ತಾ ಬಂದು ಕಳೆದ ಜೂನ್, ಜುಲೈ ವೇಳೆಗೆ ಕೆಜಿಗೆ ರೂ.170 ಇತ್ತು. ಇದೀಗ ದರ ಮತ್ತಷ್ಟು ಕುಸಿದಿದೆ. ಈಗ ಮಾರುಕಟ್ಟೆಗೆ ಕೊಕ್ಕೊ ಬರುತ್ತಾ ಇಲ್ಲಾ ಕೆಲವು ದಿನಗಳಲ್ಲಿ ಅಲ್ಪ ಸ್ವಲ್ಪ ಕೊಕ್ಕೊ ಬರುತ್ತಿದೆ ಎನ್ನುತ್ತಾರೆ ಸುಳ್ಯದ ವ್ಯಾಪಾರಸ್ಥರು. ಮಳೆ ವಿಪರೀತ ಸುರಿದ ಕಾರಣ ಕೊಕ್ಕೊ ಕಾಯಿಗಳೆಲ್ಲ ಕರಟಿ ಹೋದ ಕಾರಣ ಮಾರಾಟಕ್ಕೆ ಕೊಕ್ಕೊ ಸಿಗುತ್ತಾ ಇಲ್ಲಾ ಎನ್ನುತ್ತಾರೆ ಕೃಷಿಕರು.
ವರ್ಷದಲ್ಲಿ 8-9 ತಿಂಗಳ ಕಾಲ ಫಸಲು ಕೊಡುವ ಬೆಳೆ ಕೊಕ್ಕೊ. ಆದರೆ ಹಲವು ವರ್ಷಗಳಿಂದ ಕೊಕ್ಕೊ ದರ ಕೆಜಿಗೆ 50-60ರೂ ಆಸುಪಾಸಿನಲ್ಲಿಯೇ ಗಿರಕಿ ಹೊಡೆಯುತ್ತಿತ್ತು. ಇದರಿಂದ ಕೊಕ್ಕೊ ಕೃಷಿ ಲಾಭದಾಯಕವಾಗಿಲ್ಲ ಎಂದು ಕೃಷಿಕರು ನಿಧಾನಕ್ಕೆ ಕೊಕ್ಕೊ ಕೃಷಿಯಿಂದ ವಿಮುಖರಾಗ ತೊಡಗಿದರು. ಇದರಿಂದ ಕೊಕ್ಕೊ ಇಳುವರಿಯೂ ಕಡಿಮೆಯಾಯಿತು. ಆದರೆ ಕಳೆದ ಸೀಸನ್ನಲ್ಲಿ ಉತ್ತಮ ದರ ಬಂದ ಕಾರಣ ಕೃಷಿಕರಲ್ಲಿ ಕೊಕ್ಕೊ ಬೆಳೆ ಕುರಿತು ಮತ್ತೆ ಆಸಕ್ತಿ ಚಿಗುರಿತು. ಹಲವು
ಮಂದಿ ಕೃಷಿಕರು ಹೊಸತಾಗಿ ಕೊಕ್ಕೊ ಕೃಷಿ ಆರಂಭಿಸಿದ್ದಾರೆ.
ಉತ್ತಮ ಮಿಶ್ರ ಬೆಳೆಯಾದರೂ ಹಲವು ಸಮಸ್ಯೆಗಳು ಕೊಕ್ಕೊ ಬೆಳೆಯನ್ನು ಕಾಡುತ್ತಾ ಇರುತ್ತದೆ. ಮಳೆ ಅಧಿಕ ಆದರೆ ಕೊಕ್ಕೊ ಕಾಯಿ ಕರಗುವುದು, ಮಂಗ, ಅಳಿಲು, ಕಬ್ಬೆಕ್ಕು ಮತ್ತಿತರ ಪ್ರಾಣಿಗಳ ಉಪಟಳದಿಂದ ಕೊಕ್ಕೊ ಫಸಲು ಕಡಿಮೆಯಾಗಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲಾ ಎಂಬ ಸ್ಥಿತಿ ಕೃಷಿಕರದ್ದು. ಅಲ್ಲದೆ ಉತ್ತಮ ದರವೂ ಇಲ್ಲದೆ ನಷ್ಟ ಉಂಟಾಗುತ್ತದೆ. ಮಳೆ ಬಂದ ಕೂಡಲೇ
ಕೊಕ್ಕೊಗೆ ಕೊಳೆ ರೋಗ ಬಾದಿಸುತ್ತದೆ.ಕೊಕ್ಕೊ ಕಾಯಿ ಕಪ್ಪು ಬಣ್ಣಕ್ಕೆ ತಿರುಗಿ ನಶಿಸಿ ಹೋಗುತ್ತದೆ. ಬೋಡೋ ಮಿಶ್ರಣ ಸಿಂಪಡಿಸಿದರೆ ಕೊಳೆ ರೋಗವನ್ನು ನಿಯಂತ್ರಿಸಬಹುದು.ಆದರೆ ಬೋಡೋ ಸಿಂಪಡಿಸಿದರೂ ಈ ಬಾರಿಯ ಮಳೆಯ ಹೊಡೆತ ತಾಳಲಾರದೆ ಕೊಕ್ಕೊ ಕೃಷಿ ನಶಿಸಿ ಹೋಗಿದೆ ಎನ್ನುತ್ತಾರೆ ಕೃಷಿಕರು.