ನವದೆಹಲಿ: ಕೊಂಕಣ ರೈಲ್ವೆ ನಿಗಮದ ವಿಲೀನ, ಮಂಗಳೂರು ರೈಲ್ವೆ ವ್ಯಾಪ್ತಿ ಆಡಳಿತಾತ್ಮಕ ಪುನರ್ ರಚನೆ ಸೇರಿದಂತೆ ರೈಲ್ವೆ ಸಚಿವಾಲಯಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸೋಮವಾರ ಲೋಕಸಭೆಯಲ್ಲಿ ಸದನದ ಗಮನ ಸೆಳೆದಿದ್ದಾರೆ.ರೈಲ್ವೆ ಸಚಿವಾಲಯದ ಅನುದಾನ ಬೇಡಿಕೆ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಮಾತನಾಡಿದ ಕ್ಯಾ. ಚೌಟ ಅವರು ಸುಮಾರು ಒಂದು ದಶಕಗಳಿಂದ ವಿಸ್ತರಣೆಗೆ ಕಾಯುತ್ತಿದ್ದ
ಮಂಗಳೂರು-ಪುತ್ತೂರು-ಕಬಕ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ಜಂಕ್ಷನ್ ಗೆ ವಿಸ್ತರಿಸಿರುವ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸಿದ ಅವರು, ಇದರಿಂದ ದಿನನಿತ್ಯ ಓಡಾಡುವ ಪ್ರಯಾಣಿಕರು ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ಹೋಗುವ ಯಾತ್ರಾರ್ಥಿಗಳಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದರು. ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ರೈಲ್ವೆ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಸದನದ ಗಮನಸೆಳೆದ ಸಂಸದ ಕ್ಯಾ. ಚೌಟ ಅವರು, ಆರ್ಥಿಕವಾಗಿ ಹಲವಾರು ಸವಾಲು ಎದುರಿಸುತ್ತಿರುವ ಕೊಂಕಣ ರೈಲ್ವೆ ನಿಗಮ(ಕೆಆರ್ಸಿಎಲ್)ವನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕು. ಇದರಿಂದ ನಿಗಮದ ಸುಮಾರು 2,589 ಕೋಟಿ ರೂ. ಸಾಲದ ಹೊರೆಯನ್ನು ತಪ್ಪಿಸಿ ಆರ್ಥಿಕ ಸದೃಢತೆಯನ್ನು ಹೆಚ್ಚಿಸಬಹುದು. ಆ ಮೂಲಕ ಕೊಂಕಣ ರೈಲ್ವೆಯ ಕಾರ್ಯ ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸುಧಾರಣೆ ತರಬಹುದು ಎಂದು ಹೇಳಿದ್ದಾರೆ.
ಇನ್ನು ಬಹಳ ವರ್ಷಗಳಿಂದ ಬೇಡಿಕೆಯಾಗಿಯೇ ಉಳಿದಿರುವ ಮಂಗಳೂರು ರೈಲ್ವೆ ವ್ಯಾಪ್ತಿಯ ಆಡಳಿತಾತ್ಮಕ ಅಡೆ-ತಡೆ ದೂರ ಮಾಡುವ ಬಗ್ಗೆ ಪ್ರಸ್ತಾಪಿಸಿದ ಕ್ಯಾ. ಚೌಟ ಅವರು, ಮಂಗಳೂರು ರೈಲ್ವೆ ಭಾಗದ ವ್ಯಾಪ್ತಿಯನ್ನು ದಕ್ಷಿಣ ರೈಲ್ವೆ ವಲಯದ ಪಾಲ್ಘಾಟ್ ವಿಭಾಗದಿಂದ ಬೇರ್ಪಡಿಸಿ ಅದನ್ನು ನೈರುತ್ಯ ರೈಲ್ವೆ ವ್ಯಾಪ್ತಿಗೆ ಬರುವ ಮೈಸೂರು ವಿಭಾಗಕ್ಕೆ ಸೇರಿಸಬೇಕು. ಇದರಿಂದ ಈ ಭಾಗದ ರೈಲ್ವೆ ವಿಚಾರಗಳಿಗೆ ಸಂಬಂಧಿಸಿದಂತೆ ಮತ್ತಷ್ಟು ಸುಧಾರಣೆ ತರುವ ಜತೆಗೆ ಮೂಲಸೌಕರ್ಯ ಅಭಿವೃದ್ಧಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ನುಡಿದರು.
ಬೆಂಗಳೂರು-ಮಂಗಳೂರು ರೈಲ್ವೆ ಸಂಪರ್ಕದ ಬಗ್ಗೆಯೂ ಉಲ್ಲೇಖಿಸಿದ ಸಂಸದ ಕ್ಯಾ. ಚೌಟ ಅವರು, ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಾಸನ-ಮಂಗಳೂರು ರೈಲ್ವೆ ಅಭಿವೃದ್ಧಿ ಕಂಪೆನಿ(ಎಚ್ಎಂಆರ್ಡಿಸಿ)ಯನ್ನು ಕೂಡ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕು ಅಥವಾ ಕರ್ನಾಟಕ ಸರ್ಕಾರದ ಅದರ ಸಂಪೂರ್ಣ ಹೊಣೆಯನ್ನು ನೀಡಿ ಆ ಮೂಲಕ ಸರಕು ಸಾಗಣೆ ಹಾಗೂ ಪ್ರಯಾಣಿಕರ ದಟ್ಟನೆ ಹೆಚ್ಚಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ನಡುವೆ ಮಂಗಳೂರು ನವಬಂದರು ಹಾಗೂ ಬೆಂಗಳೂರು ನಡುವೆ ಪ್ರತ್ಯೇಕ ಸರಕು ಸಾಗಾಟ ಕಾರಿಡಾರ್ ನಿರ್ಮಿಸುವುದರಿಂದ ಕರಾವಳಿಯ ವ್ಯಾಪಾರ-ವಹಿವಾಟು ಹೆಚ್ಚಿಸುವ ಜತೆಗೆ ಸರಕು ಸಾಗಣೆ ವೆಚ್ಚವನ್ನು ಕಡಿಮೆಗೊಳಿಸಬಹುದು ಎಂದು ಅಭಿಪ್ರಾಯಪಟ್ಟರು.