ಹಂಗೇರಿ: ಚೆಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರತ ಒಲಿಂಪಿಯಾಡ್ನಲ್ಲಿ ಚಿನ್ನದ ಪದಕ ಗೆದ್ದಿದೆ. ಹಂಗೇರಿಯಲ್ಲಿ ನಡೆಯುತ್ತಿರುವ ಚೆಸ್ ಒಲಿಂಪಿಯಾಡ್ನಲ್ಲಿ ಭಾರತವು ಮೊದಲ ಬಾರಿಗೆ ಮುಕ್ತ ವಿಭಾಗ (ಪುರುಷರು ಮತ್ತು ಮಹಿಳೆಯರ ವಿಭಾಗ) ದಲ್ಲಿ ಏಕಕಾಲದಲ್ಲಿ
ಚಾಂಪಿಯನ್ ಆಗಿ ಹೊರಹೊಮ್ಮಿದೆ. ಡಿ.ಗುಕೇಶ್, ಆರ್.ಪ್ರಗ್ನಾನಂದ್, ಅರ್ಜುನ್ ಎರಿಗೇಸಿ ಸೇರಿದಂತೆ 5 ಆಟಗಾರರನ್ನು ಒಳಗೊಂಡ ಭಾರತ ಪುರುಷರ ತಂಡ ಮುಕ್ತ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರೆ, ಇತ್ತ ತಾನಿಯಾ ಸಚ್ದೇವ್, ಆರ್ ವೈಶಾಲಿ, ದಿವ್ಯಾ ದೇಶಮುಖ್ ಅವರಿದ್ದ ಮಹಿಳಾ ತಂಡವೂ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿತು. ಭಾರತ ಇದೇ ಮೊದಲ ಬಾರಿಗೆ ಎರಡೂ ವಿಭಾಗಗಳಲ್ಲಿ ಚಿನ್ನ ಗೆದ್ದುಕೊಂಡಿದ್ದಲ್ಲದೆ, ಎರಡೂ ಚಿನ್ನವನ್ನು ಏಕಕಾಲದಲ್ಲಿ ಗೆದ್ದು ಸಂಚಲನ ಮೂಡಿಸಿದೆ.
ಹಂಗೇರಿಯ ರಾಜಧಾನಿ ಬುಡಾಪೆಸ್ಟ್ನಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ 45ನೇ ಚೆಸ್ ಒಲಿಂಪಿಯಾಡ್ನಲ್ಲಿ ಭಾರತವನ್ನು ಈಗಾಗಲೇ ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಇದು ಅಂತರರಾಷ್ಟ್ರೀಯ ಚೆಸ್ ಫೆಡರೇಶನ್ನಿಂದ ಆಯೋಜಿಸಲಾದ ಚೆಸ್ನ ವಿಶ್ವದ ಅತಿದೊಡ್ಡ ತಂಡ ಪಂದ್ಯಾವಳಿಯಾಗಿದ್ದು, ಇದರಲ್ಲಿ ವಿವಿಧ ದೇಶಗಳು ಭಾಗವಹಿಸುತ್ತವೆ.