ಸುಳ್ಯ:ಸುಳ್ಯ-ಕಾಸರಗೋಡು ಸಂಪರ್ಕ ಕಲ್ಪಿಸುವ ಚೆರ್ಕಳ-ಜಾಲ್ಸೂರು ಅಂತಾರಾಜ್ಯ ಹೆದ್ದಾರಿಗೆ ಭಾರೀ ಮಳೆಯಿಂದಾಗಿ ಹಾನಿ ಸಂಭವಿಸಿದ್ದು ರಸ್ತೆಯಲ್ಲಿ ಭಾರೀ ಹೊಂಡಗಳು ನಿರ್ಮಾಣ ಆಗಿದೆ. ರಸ್ತೆಯಲ್ಲಿ ಕೇರಳ-ಕರ್ನಾಟಕ ಗಡಿ ಪ್ರದೇಶವಾದ ಮುರೂರು ಎಂಬಲ್ಲಿ ಬೃಹದಾಕಾರದ ಹೊಂಡ ಗುಂಡಿಗಳು ನಿರ್ಮಾಣವಾಗಿದೆ.ಇದರಿಂದ ಬಸ್ ಸೇರಿದಂತೆ ವಾಹನಗಳು ಬದಲಿ ರಸ್ತೆಯಲ್ಲಿ ಸಂಚಾರ ನಡೆಸಿದವು. ಮುರೂರು ಎಂಬಲ್ಲಿ ರಸ್ತೆಯಲ್ಲಿ
ಬೃಹತ್ ಹೊಂಡಗಳಾಗಿದ್ದು, ಕೆಸರು, ನೀರು ತುಂಬಿ ಸಂಪೂರ್ಣ ಎಕ್ಕುಟ್ಟಿ ಹೋಗಿದೆ. ರಸ್ತೆಯಲ್ಲಿ ನೀರು ಕೆಸರು ತುಂಬಿದ್ದು ವಾಹನಗಳು ಹೂತು ಹೋಗುವ ಅಪಾಯ ಇದೆ.ರಸ್ತೆಯ ಬದಿಯಿಂದಲೇ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇಲ್ಲಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಂಚಾರ ದುಸ್ತರವಾಗಿದೆ. ಅಲ್ಲದೆ ರಸ್ತೆ ಕುಸಿಯುವ ಭೀತಿಯೂ ಎದುರಾಗಿದೆ.ನಿನ್ನೆ ರಾತ್ರಿ ಈ ಸ್ಥಳದಲ್ಲಿ ಲಾರಿ ಮತ್ತಿತರ ವಾಹನಗಳು ಕೆಸರಿನಲ್ಲಿ ಸಿಲುಕಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ಇದರಿಂದಾಗಿ ಇಂದು ಸುಳ್ಯ-ಕಾಸರಗೋಡು ಮಾರ್ಗದಲ್ಲಿ ಪ್ರಯಾಣಿಸುವ ಬಸ್ಸು ಸೇರಿದಂತೆ ವಾಹನಗಳು
ಜಾಲ್ಸೂರು-ಮುರೂರು- ಮಂಡೆಕೋಲು-ಅಡೂರು- ಕೊಟ್ಯಾಡಿ ರಸ್ತೆ, ಸುಳ್ಯ- ಮಂಡೆಕೋಲು-ಅಡೂರು- ಕೊಟ್ಯಾಡಿ ರಸ್ತೆ, ಕೊಟ್ಯಾಡಿ- ಈಶ್ವರಮಂಗಲ ಕಾವು-ಸುಳ್ಯ ರಸ್ತೆಗಳಲ್ಲಿ ಸಂಚರಿಸಿದವು.
ಬಸ್ ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿರುವ ಅಂತಾರಾಜ್ಯ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಹಾಗೂ ಪ್ರಯಾಣಿಕರು ಆಗ್ರಹಿಸಿದ್ದಾರೆ.
ಅಂತಾರಾಜ್ಯ ಎಕ್ಕುಟ್ಟಿ ಹೋಗಿದ್ದು ಹಲವು ಕಡೆಗಳಲ್ಲಿ ಬೃಹದಾಕಾರದ ಹೊಂಡ ಗುಂಡಿಗಳು ಬಿದ್ದು ಸಂಚಾರ ದುಸ್ತರವಾಗಿದೆ.
ಸುಳ್ಯ ಹಾಗೂ ಆದೂರು ಪೊಲೀಸರು, ಕೇರಳ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಳ್ಯ ಕಾಸರಗೋಡು ಸಂಪರ್ಕ ಕಲ್ಪಿಸುವ ಚೆರ್ಕಳ-ಜಾಲ್ಸೂರು ರಸ್ತೆಯನ್ನು ಕೇರಳ ಲೋಕೋಪಯೋಗಿ ಇಲಾಖೆ ನಿರ್ವಹಣೆ ಮಾಡುತಿದೆ.