ರಾವಲ್ಪಿಂಡಿ: ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 5 ವಿಕೆಟ್ಗಳಿಂದ ಮಣಿಸಿರುವ ನ್ಯೂಜಿಲೆಂಡ್ ತಂಡ ಟೀಂ ಇಂಡಿಯಾದೊಂದಿಗೆ ಸೆಮಿಫೈನಲ್ಗೇರಿದರೆ, ಇತ್ತ ಸೋತ ಬಾಂಗ್ಲಾದೇಶ ಹಾಗೂ ಆತಿಥೇಯ ಪಾಕಿಸ್ತಾನ ಟೂರ್ನಿಯಿಂದ ಹೊರ ಬಿದ್ದಿದೆ.
ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಸ್ಪರ್ಧೆಯಲ್ಲಿ ಉಳಿಯಲು
ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದ ಫಲಿತಾಂಶ ಬಾಂಗ್ಲಾದೇಶದ ಪರವಾಗಿ ಬರಬೇಕಿತ್ತು. ಆದರೆ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸುವ ಮೂಲಕ ಪಾಕಿಸ್ತಾನದ ಭರವಸೆಯನ್ನು ಹುಸಿಗೊಳಿಸಿತು.
ಪಾಕಿಸ್ತಾನದ ಜೊತೆಗೆ ಬಾಂಗ್ಲಾದೇಶ ತಂಡವೂ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ.ಈ ಎರಡೂ ತಂಡಗಳು ಈ ಟೂರ್ನಿಯಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನ್ನು ಅನುಭವಿಸಿದರೆ, ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೋತಿತು. ಮತ್ತೊಂದೆಡೆ, ಬಾಂಗ್ಲಾದೇಶ ತಂಡವು ನ್ಯೂಜಿಲೆಂಡ್ಗಿಂತ ಮೊದಲು ಭಾರತ ತಂಡದ ವಿರುದ್ಧದ ಪಂದ್ಯವನ್ನು ಸೋತಿತ್ತು. ಈಗ ಈ ಎರಡೂ ತಂಡಗಳು ಗುಂಪು ಹಂತದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಪರಸ್ಪರ ವಿರುದ್ಧ ಆಡಲಿವೆ. ಇದು ಪಾಯಿಂಟ್ ಟೇಬಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಇಂದಿನ ಪಂದ್ಯದಲ್ಲಿ, ನ್ಯೂಜಿಲೆಂಡ್ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡವು 50 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 236 ರನ್ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ತಂಡದ ಪರ ನಜ್ಮುಲ್ ಹುಸೇನ್ ಶಾಂಟೋ ಅತಿ ಹೆಚ್ಚು 77 ರನ್ ಗಳಿಸಿದರು. ಅವರನ್ನು ಹೊರತುಪಡಿಸಿ, ಬೇರೆ ಯಾವುದೇ ಆಟಗಾರ 50 ರನ್ಗಳ ಗಡಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. 237 ರನ್ಗಳ ಗುರಿಯನ್ನು ಬೆನ್ನಟ್ಟಲು ಬಂದ ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ ಶತಕ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ನ್ಯೂಜಿಲೆಂಡ್ 46.1 ಓವರ್ಗಳಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡು 240 ರನ್ ಬಾರಿಸಿ ಗುರಿ ತಲುಪಿತು.