ಸುಳ್ಯ:ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರಕಾರ ಯಾವುದೇ ಅನುದಾನ ಬಿಡುಗಡೆ ಮಾಡುವುದಿಲ್ಲ, ಇದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಂಡಿದೆ, ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ. ಸರಕಾರದ ಈ ವೈಫಲ್ಯವನ್ನು ಮರೆ ಮಾಚಲು ಸಂಘ ಪರಿವಾರದ ಮುಖಂಡರು ಹಾಗೂ ಕಾರ್ಯಕರ್ತರ ಮನೆಗೆ ತಡರಾತ್ರಿ ಪೊಲೀಸರನ್ನು ಕಳಿಸಿ ಭಯಪಡಿಸುವ ಕೆಲಸವನ್ನು ಮಾಡುತಿದೆ. ಇದು ಮುಂದುವರಿದರೆ
ಉಗ್ರ ಹೋರಾಟ ಮಾಡಲಾಗುವುದು ಎಂದು ದ.ಕ. ಸಂಸದ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು ರಾತ್ರಿ 11 ಗಂಟೆಗೆ ಸಂಘ ಪರಿವಾರದ ಪ್ರಮುಖರ ಮನೆಗೆ ತೆರಳಿ ಭಾವಚಿತ್ರ ತೆಗೆಯುವುದು, ದಾಖಲೆ ಕೇಳುವುದು ಯಾಕೆ, ಈ ರೀತಿಯ ನಡವಳಿಕೆ ಯಾವ ಕಾನೂನಿನಲ್ಲಿದೆ ಎಂದು ಪ್ರಶ್ನಿಸಿದ ಅವರು ಈ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಹೇಳಿದರು.ಪೊಲೀಸ್ ಇಲಾಖೆಯ ಮೂಲಕ ಸಂಘ ಪರಿವಾರದ ಹಾಗೂ

ಬಿಜೆಪಿಯ ಮುಖಂಡರನ್ನು ಬೆದರಿಸಿ ರಾಜಕೀಯ ಲಾಭ ಪಡೆಯಬಹುದು ಎಂದು ಕಾಂಗ್ರೆಸ್ ತಿಳದಿದ್ದರೆ ಅದು ಅವರ ಭ್ರಮೆ ಎಂದು ಹೇಳಿದರು. ಜಿಲ್ಲೆ ಹಾಗೂ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಗೃಹ ಸಚಿವರು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದ ಅವರು ಎರಡು ವರ್ಷಗಳಿಂದ ಜಿಲ್ಲೆಯ ಬಿಜೆಪಿ ಶಾಸಕರಿಗೆ ಯಾವುದೇ ಅಭಿವೃದ್ಧಿ ಅನುದಾನ ಬರುತ್ತಿಲ್ಲ, ಜಿಲ್ಲೆಯ ಶಾಂತಿ ಸುವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿಗಳಾಗಲೀ, ಗೃಹ ಸಚಿವರಾಗಲೀ ಜಿಲ್ಲೆಯ ಶಾಸಕರು ಹಾಗೂ ಸಂಸದರನ್ನು ಸೇರಿಸಿ ಒಂದು ಸಭೆಯನ್ನೂ ಕರೆದಿಲ್ಲ, ಜಿಲ್ಲೆಯ ಬಗ್ಗೆ ಸರಕಾರ ಮಲತಾಯಿ ಧೋರಣೆ ತೋರುತಿದೆ ಎಂದು ಆರೋಪಿಸಿರು.
ಆಪರೇಷನ್ ಸಿಂಧೂರ ಹಿನ್ನಲೆಯಲ್ಲಿ ವಿದೇಶಕ್ಕೆ ತೆರಳಿದ ನಿಯೋಗದ ಭಾಗವಾಗಿರುವುದು ಹೆಮ್ಮೆ ತಂದಿದೆ. ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂಬ ಭಾರತದ ನಿಲುವನ್ನು ವಿಶ್ವದ ವಿವಿಧ ರಾಷ್ಟ್ರಗಳಿಗೆ ತಿಳಿಸಲು ಸಾಧ್ಯವಾಗಿದೆ. ಪೆಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನಲೆಯಲ್ಲಿ ಭಾರತ ನಡೆಸಿದ ಆಪರೇಷನ್ ಸಿಂಧೂರದ ಕುರಿತು ವಿವರಿಸಲಾಗಿದೆ ಎಂದು ಅವರು ಹೇಳಿದರು.
ಸುಳ್ಯದ ವಿವಿಧ ಸಮಸ್ಯೆಗಳ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ ಈ ಕುರಿತು ಚರ್ಚಿಸಲು ಶಾಸಕರ ಉಪಸ್ಥಿತಿಯಲ್ಲಿ ಪ್ರತ್ಯೇಕ ಸಭೆ ಕರೆಯುತ್ತೇನೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜಿಲ್ಲಾ ಸಮಿತಿ ಕೋಶಾಧಿಕಾರಿ ಸಂಜಯ್ ಪ್ರಭು, ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ. ಉಪಸ್ಥಿತರಿದ್ದರು.