ಸುಳ್ಯ: ಸುಳ್ಯದಲ್ಲಿ ಹತ್ತು ಹಲವು ಸಾರ್ವಜನಿಕ ಸಮಸ್ಯೆಗಳು ಜನರನ್ನು ಕಾಡುತ್ತಿದ್ದರೂ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳು ಮೌನ ವಹಿಸಿರುವುದು ಆಶ್ಚರ್ಯ ತಂದಿದೆ ಎಂದು ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ಬೊಳ್ಳೂರು ಹೇಳಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯದಲ್ಲಿ ನಿರಂತರ ವಿದ್ಯುತ್, ರಸ್ತೆ ಸಮಸ್ಯೆಗಳು ಕಾಡುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ
ಯೋಜನೆ, ಅಮೃತ್ 2 ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿ ಸಮರ್ಪಕವಾಗಿ ನಡೆಯದ ಕಾರಣ ಜನರಿಗೆ ನಡೆದಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣ ಆಗಿದೆ. ಆದರೆ ಯಾವುದೇ ಜನ ಪ್ರತಿನಿಧಿಗಳು, ಯಾವುದೇ ಪಕ್ಷದ ಮುಖಂಡರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ.ಅದರ ಪರಿಹಾರಕ್ಕೆ ಪ್ರಯತ್ನ, ಒತ್ತಡ ತರುವ ಕೆಲಸ ಜನಪ್ರತಿನಿಧಿಗಳಿಂದ ಆಗುತ್ತಿಲ್ಲ.

ಈ ಹಿನ್ನಲೆಯಲ್ಲಿ ತಮ್ಮ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ನಿಯೋಗ ವಿವಿಧ ಇಲಾಖೆಗಳ ಕಚೇರಿಗೆ ಭೇಟಿ ನೀಡಿ ಸಮಸ್ಯೆಗಳ ಪರಿಹಾರದ ಕುರಿತು ಚರ್ಚೆ ನಡೆಸಿದ್ದೇವೆ, ಲೋಕೋಪಯೋಗಿ, ತಾಲೂಕು ಪಂಚಾಯತ್, ತಾಲೂಕು ಕಚೇರಿ, ನಗರ ಪಂಚಾಯತ್, ಪೊಲೀಸ್ ಇಲಾಖೆ ಸೇರಿ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಗಿದೆ. ಅಧಿಕಾರಿಗಳ, ಸರಕಾರದ ಗಮನಕ್ಕೆ ಸಮಸ್ಯೆ ಪರಿಹರಿಸುವುದು ಮಾತ್ರ ಉದ್ದೇಶ. ರಸ್ತೆ ಬದಿ ಕಡಿದು ಹಾಕಿರುವುದಕ್ಕೆ ಎಷ್ಟು ನಷ್ಟ ಉಂಟಾಗಿದೆ ಎಂಬ ಬಗ್ಗೆ ವರದಿ ನೀಡುವಂತೆ ಇಲಾಖೆಗಳಿಗೆ ಸೂಚಿಸಿದ್ದೇವೆ.ಇದನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಈ ರೀತಿ ಇಲಾಖೆಗಳಿಗೆ ಭೇಟಿ ನೀಡಿ ಸಮಸ್ಯೆ ಬಗ್ಗೆ ಚರ್ಚಿಸಲು ಪಕ್ಷದ ಕಡೆಯಿಂದ ನಿರ್ದೇಶನ ಇದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬೊಳ್ಳೂರು ಒಳ್ಳೆಯ ಕೆಲಸ ಮಾಡಲು ಯಾರ ನಿರ್ದೇಶನವೂ ಅಗತ್ಯ ಇಲ್ಲ, ಯಾರ ನಿರ್ದೇಶನಕ್ಕೂ ಕಾಯುವುದಿಲ್ಲ ಎಂದ ಅವರು ಜನರಿಂದ ಮತ ಪಡೆದು ಗೆದ್ದ ಜನಪ್ರತಿನಿಧಿಗಳು ಏನು ಮಾಡ್ತಾ ಇದ್ದೀರಿ ಎಂದು ಪ್ರಶ್ನಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಅಧ್ಯಕ್ಷತೆ ತಮಗೆ ದೊರಕುವ ವಿಶ್ವಾಸ ಇದೆ ಎಂದು ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಕೆ.ಗೋಕುಲ್ದಾಸ್, ರಾಧಾಕೃಷ್ಣ ಪರಿವಾರಕಾನ, ಶಶಿಧರ.ಎಂ.ಜೆ, ಭವಾನಿಶಂಕರ ಕಲ್ಮಡ್ಕ, ಸತ್ಯಕುಮಾರ್ ಆಡಿಂಜ, ದಿನೇಶ್ ಸರಸ್ವತಿಮಹಲ್, ಕರುಣಾಕರ ಪಲ್ಲತ್ತಡ್ಕ, ಬಾಲಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.